ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬಾಗಿಲು ಭದ್ರತೆ ಇಲ್ಲದ ಕೊಠಡಿಯಲ್ಲಿ ಪುರಸಭೆ ನೌಕರರು ಗಣಕಯಂತ್ರಗಳನ್ನಿರಿಸಿ ಕರ್ತವ್ಯ
ನಿರ್ವಹಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಬಾಗಿಲು ಭದ್ರತೆಯಿಲ್ಲದ ಈ ಕೊಠಡಿಯಲ್ಲಿ ಖಾತಾ ಬದಲಾವಣೆ, ಖಾತಾ ಉತಾರ ಸೇರಿದಂತೆ ಕಟ್ಟಡ ಪರವಾನಿಗೆ ನೀಡುವ ವಿಭಾಗ ಮತ್ತು ಗೃಹಲಕ್ಷ್ಮೀ ಯೋಜನೆಯ ನೋಂದಣಿ ವಿಭಾಗವಿದ್ದು, ಪುರಸಭೆ ನೌಕರರು ಇಲ್ಲಿ ನಿತ್ಯ ಕಾರ್ಯನಿರ್ವಹಿಸುತಿದ್ದಾರೆ.
ಕೆಲಸ ಕಾರ್ಯಗಳಿಗಾಗಿ ನಿತ್ಯ ನೂರಾರು ಜನ ಬಂದು ಹೋಗುವ ಈ ಕೊಠಡಿಗೆ ಸುರಕ್ಷತೆ ಇಲ್ಲದಿರುವುದು ವಿಪರ್ಯಾಸ. ಅಗತ್ಯ ದಾಖಲೆಗಳು ಸೇರಿದಂತೆ ಬೆಲೆಬಾಳುವ ಕಂಪ್ಯೂಟರ್’ಗಳು, ಪ್ರಿಂಟರ್ ಹಾಗೂ ವಾಟರ್ ಫಿಲ್ಟರ್ ಮಿಷನ್, ದಾಖಲೆಗಳನ್ನು ಸಂಗ್ರಹಿಸಿರುವ ಗಾಡ್ರೇಜಗಳು, ಪವರ ಸಪ್ಲೈ ಮಾಡುವ ದೊಡ್ಡ ಯುಪಿಎಸ್ ಯುನಿವರ್ಟರ್ ಬ್ಯಾಟರಿಗಳನ್ನು ಇಲ್ಲಿ ಇರಿಸಲಾಗಿದೆ. ಬಾಗಿಲು ಕದ ಕಿತ್ತುಬಂದು ಬಹುದಿನಗಳಾದರೂ ಪುರಸಭೆ ಅಧಿಕಾರಿಗಳು ಮಾತ್ರ ದುರಸ್ತಿಗೆ ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಇನ್ನೂ ಕೆಲ ಕೊಠಡಿಗಳ ಕಿಟಕಿಗಳು ಪಾನ್ ಬೀಡಾ, ಗುಟುಖಾದ ತಿಂದು ಉಗುಳಿದ ಹೊಲಸು ಮೆತ್ತಿಕೊಂಡಿದ್ದು, ಕಣ್ಣಿಗೆ ರಾಚುತ್ತಿವೆ. ಭದ್ರತೆಯಿಲ್ಲದ ಸ್ವಚ್ಛತೆ ಇಲ್ಲದ ಅವ್ಯವಸ್ಥೆಯಿಂದ ಕೂಡಿರುವ ಕೊಠಡಿಯಲ್ಲಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವುದು ವಿಪರ್ಯಾಸ. ಒಟ್ಟಿನಲ್ಲಿ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿರುವುದಂತು ಸತ್ಯ.
ಈ ಕುರಿತು ಪುರಸಭೆ ಸದಸ್ಯ ರಾಜೇಶ್ ಪತ್ತಾರ ಹಾಗೂ ಬಸವರಾಜ ಬುಡಕುಂಟಿ ಅವರು ಪ್ರತಿಕ್ರಿಯೆ ನೀಡಿದ್ದು, ಕಟ್ಟಡ ಬಳಕೆಗೆ ಯೋಗ್ಯತೆಯಿಲ್ಲ. ದುರಸ್ತಿಯಲ್ಲಿದ್ದು, ಕಟ್ಟಡ ತೆರವುಗೊಳಿಸಿ ಮರುಕಟ್ಟಡ ನಿರ್ಮಿಸುವ ಉದ್ದೇಶವಿದೆ. ಬೇರೆಡೆ ಸ್ಥಳವಿಲ್ಲದಿರುವುದರಿಂದ ಅನಿವಾರ್ಯವಾಗಿ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಾಧಿಕಾರಿ ಗಮನಕ್ಕೆ ತಂದು ಬಾಗಿಲು ಭದ್ರಪಡಿಸುವುದಾಗಿ ತಿಳಿಸಿದರು.