ವಿದ್ಯಾರ್ಥಿನಿಯರು ಆರೋಗ್ಯದ ಕಡೆಗೆ ಗಮನ ಹರಿಸಿ : ಡಾ.ದೀಪಾ ಹುಲಸೂರು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ವಿದ್ಯಾರ್ಥಿನಿಯರು ಸೇವಾಮನೋಭಾವನೆಯ ಜೊತೆಗೆ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಹೋಮಿಯೋಪತಿ ವೈದ್ಯೆ ದೀಪಾ ಹುಲಸೂರು ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಆರೋಗ್ಯ ಜೀವನಕ್ಕೆ ಸ್ವಚ್ಛ, ಶುದ್ಧ, ಪೌಷ್ಠಿಕ ಆಹಾರ ಸೇವಿಸಬೇಕು. ಜೊತೆಗೆ ವಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದ ಅವರು, ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಹೋಮಿಯೋಪತಿ ವೈದ್ಯಳಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಏಳು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಂದಿವಾತ, ಕಿಡ್ನಿ ಸ್ಟೋನ್, ಮುಟ್ಟಿನ ತೊಂದರೆ ಸೇರಿದಂತೆ ಅನೇಕ ಖಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಒಳ್ಳೆಯ ಔಷಧವಿದ್ದು, ಉಚಿತ ಚಿಕಿತ್ಸೆ ನೀಡಲಾಗುತ್ತದೆ. ತಮ್ಮ ಕುಟುಂಬ ಸದಸ್ಯರಿಗೆ, ಸ್ನೇಹಿತೆಯರಿಗೆ ಆರೋಗ್ಯ ತೊಂದರೆಯಾದಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಕಾರ್ಯಕ್ರಮದ ರೂಪುರೇಷೆ ಕುರಿತು ರಾಷ್ಟ್ರೀಯ ಸೇವಾಯೋಜನೆ ಅಧಿಕಾರಿ ಡಾ. ನಾಗರಾಜ ಹೀರಾ ಅವರು ಮಾತನಾಡಿದರು. ಬಲರಾಮ ಜೋಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಿ.ಪಿ. ಕುಲಕರ್ಣಿ, ರಾಜಶೇಖರ ಹಿರೇಮಠ, ಸಂತೋಷಕುಮಾರ ಪಾಟೀಲ ಸೇರಿದಂತೆ ಶೋಭಾ ಶ್ರೀದೇವಿ ಸಂಗಟಿ, ರಾಘವೇಂದ್ರ ಉಪಸ್ಥಿತರಿದ್ದರು. ಉಪನ್ಯಾಸಕ ದಾದಪೀರ್ ವಂದಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು.