ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಮಿಲಾದುನ್ನಬಿಯನ್ನು ಜಿಲ್ಲೆಯ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಸಡಗರದಿಂದ ಆಚರಿಸಿದರು.
ಈದ-ಈ-ಮಿಲಾದ್ -ಉನ್-ನಬಿ ಪ್ರಯುಕ್ತ ಬುಧವಾರ ಇಡೀ ರಾತ್ರಿ ಮುಸ್ಲಿಂ ಬಾಂಧವರು ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಹೊಂದಿದ ಹಾಡುಗಳನ್ನು ಹಾಡುವ ಮೂಲಕ ಜಾಗರಣೆ ಮಾಡಿದರು. ಗುರುವಾರ ಬೆಳಿಗ್ಗೆ ಪಟ್ಟಣದ ಜಾಮಿಯಾ ಮಸೀದಿಯಿಂದ ಆರಂಭಗೊಂಡ ಮದೀನಾ ಚಿತ್ರದ ಸ್ತಬ್ಧ ಮೆರವಣಿಗೆ ಹೈದರಲಿ ವೃತ್ತ, ಕೋಕಿಲಾ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತ ಮರಳಿ ಮಾರುತಿ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಸಾಗಿತು.
ಮೆರವಣಿಗೆಯಲ್ಲಿ ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರು, ಹಸನಸಾಬ ದೋಟಿಹಾಳ ಸೇರಿದಂತೆ ಪುರಸಭೆ ಸದಸ್ಯರು ಭಾಗವಹಿಸಿದ್ದರು. ಬೃಹತ್ ಧ್ವಜ ಹಿಡಿದ ಮುಸ್ಲಿಂ ಯುವಕರು ಪೈಗಂಬರ್ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಬಳಿಕ ಕರೀಂ ಕಾಲೋನಿಯೋ ಮಕ್ಬುಲಿಯಾ ಮಸೀದಿಯಲ್ಲಿ ಮೆರವಣಿಗೆ ಸಂಪನ್ನಗೊಂಡಿತು. ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಿತ್ತು.
ಮದ್ಯಾಹ್ನ ಪುರಸಭೆ ಹತ್ತಿರ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸುವ ಮೂಲಕ ಪರಸ್ಪರ ಶುಭ ಕೋರಿದರು. ನಂತರ ಮಸ್ಜಿದಿಗಳಲ್ಲಿ ನಡೆದ ಧರ್ಮಸಭೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ತತ್ವಾದರ್ಶಗಳ ಕುರಿತು ವಿಶೇಷ ಉಪನ್ಯಾಸಗಳು ಜರುಗಿದವು. ಅದೇರೀತಿ ಮುಸ್ಲಿಂ ಮಹಿಳೆಯರಿಗಾಗಿ ಇಲ್ಲಿಯ ಬಿಬಿ ಫಾತಿಮಾ ಶಾದಿ ಮಹಲಿನಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮಗಳು ನಡೆದವು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನ ಪ್ರಯುಕ್ತ ಜಾಮಿಯಾ ಮಸೀದಿ ಬಳಿಯ ಸರ್ಕಾರಿ ಕನ್ಯಾ ಶಾಲೆಯಲ್ಲಿ ಹೈದರ ಅಲಿ ನೌಜವಾನ್ ಕಮೀಟಿ ಹಾಗೂ ಜೀವ ಸಂಜೀವಿನಿ ರಕ್ತನಿಧಿ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ವಿವಿಧ ಸಮುದಾಯಗಳ 70ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರದಿಂದ ಸರ್ಟಿಫಿಕೇಟ್ ಪಡೆದು ಮಾದರಿಯಾದರು.
ಒಟ್ಟಿನಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ, ಹನುಮಸಾಗರ, ಹನುಮನಾಳ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಂ ಸಮಾಜದ ಯುವಕರು, ಗಣ್ಯ ಮಾನ್ಯರು ಸೇರಿಕೊಂಡು ಆಚರಿಸಿದ ಪೈಗಂಬರ್ ಜಯಂತಿ ಶಾಂತಿ ಸಂಭ್ರಮಕ್ಕೆ ಸಾಕ್ಷಿಯಾಗಿತು.