ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನವಾದ ಈದ್ ಮಿಲಾದುನ್ನಬಿಯಂದು ಮುಸ್ಲಿಂ ಬಾಂಧವರು ಗಣೇಶ ಮೂರ್ತಿ ಪೂಜೆಯೊಂದಿಗೆ ಹಬ್ಬ ಆಚರಿಸಿರುವುದು ವಿಶೇಷ.
ಪಟ್ಟಣದ 14ನೇ ವಾರ್ಡ್ ಶ್ರೀ ವೀರಭದ್ರೇಶ್ವರ ನಗರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ 13 ಅಡಿಯ ಬೃಹದಾಕಾರದ ತಾವರಗೇರಿಕಾ ಮಹಾರಾಜ್ ಮಣ್ಣಿನ ಗಣೇಶ ಮೂರ್ತಿಯನ್ನು ಮುಸ್ಲಿಂ ಬಾಂಧವರು ಸ್ವತಃ ಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಗಣೇಶನಿಗೆ ಪುಷ್ಪ ಸಮರ್ಪಿಸಿ ವಿಶೇಷ ಆರತಿ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಹಬ್ಬ ಆಚರಿಸಿ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದರು.
ಮೂರ್ತಿ ಪ್ರತಿಷ್ಠಾಪನಾ ದಿನದಿಂದಲೂ ಪ್ರತಿದಿನ ನಗರದ ನಿವಾಸಿಗಳು ಅನ್ನಸಂತರ್ಪಣೆ ಕೈಗೊಂಡಿದ್ದಾರೆ. ಮಹಿಳೆಯರು ಪ್ರತಿದಿನ ರಂಗೋಲಿ ಸೇರಿ ವಿವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತಿದ್ದಾರೆ. ಪಟ್ಟಣದಲ್ಲಿ ಬಹುತೇಕ ಗಣೇಶ ಮೂರ್ತಿಗಳು ವಿಸರ್ಜನೆ ಮಾಡಿರುವುದನ್ನು ಅರಿತ ಪಟ್ಟಣದ ಮುಸ್ಲಿಂ ಪಂಚ್ ಕಮಿಟಿಯವರು, ಹಿರಿಯರು ಸೇರಿಕೊಂಡು 12 ದಿನಗಳ ಕಾಲ ಪೂಜಿಸಲ್ಪಡುವ ಶ್ರೀ ವೀರಭದ್ರೇಶ್ವರ ನಗರದ ಗಣೇಶನ ಸನ್ನಿಧಾನದಲ್ಲಿ ಧರ್ಮ ಭೇದ ಭಾವ ಬದಿಗೊತ್ತಿ ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನ ಆಚರಿಸಿರುವುದು ಈ ದಿನ ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಈ ಕುರಿತು ಮಾಹಿತಿ ನೀಡಿರುವ ಆಯೋಜಕರಾದ ಅಮರೇಶ ಕುಂಬಾರ ಅವರು, ಹನುಮಂತ ಸುರ್ವೆ, ರಾಹುಲ್ ಗೋಟೂರು, ಪರಶುರಾಮ ಡಂಬಳ, ಮಂಜುನಾಥ ದೇಸಾಯಿ ಹಾಗೂ ನಗರದ ಯುವಕರ ಬಳಗ ಸೇರಿ ಪ್ರತಿ ವರ್ಷ ವಿಶೇಷ ರೀತಿಯಲ್ಲಿ ತಾವರಗೇರಿಕಾ ಮಹಾರಾಜ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇದೇ ಸೆಪ್ಟೆಂಬರ್ 30 ರಂದು ಗಣೇಶ್ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.