ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ ಕರೆಗೆ ಕುಷ್ಟಗಿ ಪಟ್ಟಣ ನೀರಸ ಪ್ರತಿಕ್ರಿಯೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಕಾವೇರಿ ನೀರಿಗಾಗಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಬೆಳಿಗ್ಗೆ ಎಂದಿನಂತೆ ಬಸ್ ಸಂಚಾರ ಆರಂಭಗೊಂಡಿದೆ. ಶುಕ್ರವಾರ ಮಾರುಕಟ್ಟೆ ಸಾಮಾನ್ಯವಾಗಿ ರಜೆ ಇದ್ದರೂ ಕೆಲ ಅಂಗಡಿಗಳು ಹೊರತುಪಡಿಸಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದವು. ಬಂದ್‌ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ರಜೆ ನೀಡಿಲ್ಲ. ಶಾಲಾ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖಮಾಡಿದರು. ಒಟ್ಟಿನಲ್ಲಿ ಕುಷ್ಟಗಿ ಪಟ್ಟಣದಲ್ಲಿ ಕರ್ನಾಟಕ ಬಂದ್ ಕರೆಗೆ ಬೆಂಬಲ ವ್ಯಕ್ತವಾಗಲಿಲ್ಲ.

ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ವೀರಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆ, ಪ್ರಜಾಶಕ್ತಿ ಸಂಘಟನೆಗಳ ಕೆಲವರು ಸಮಾವೇಶಗೊಂಡು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಮ್ಮೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.

ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತದಿಂದ ಮಾರುತಿ ವೃತ್ತ, ಬಸವೇಶ್ವರ ವೃತ್ತದ ವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸ್ ಇಲಾಖೆ ಅಡ್ಡಿಪಡಿಸಿತು, ಉಪದ್ರವ ಸೃಷ್ಠಿಸದಂತೆ ಪಿಎಸ್’ಐ ಮುದ್ದುರಂಗಸ್ವಾಮಿ ಅವರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಕೃತಿ ದಹನ ಕೈಬಿಟ್ಟರು.

ಪ್ರಸಕ್ತ ವರ್ಷ ಮಳೆಯ ಅಭಾವ ಇರುವುದರಿಂದ ಬೆಂಗಳೂರು ಸೇರಿದಂತೆ ಐದಾರೂ ಜಿಲ್ಲೆಗೆ ಕುಡಿಯುವದಕ್ಕೆ ಮತ್ತು ಭತ್ತದ ಬೆಳೆಗೆ ಕಾವೇರಿ ನೀರು ಅವಶ್ಯವಾಗಿದೆ. ಆದರೆ, ತಮಿಳುನಾಡು ಬೆಳೆಗೆ ನೀರು ಕೇಳುವ ಮೂಲಕ ರಾಜಕಾರಣ ಮಾಡುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ನೀರು ಬಿಡಬೇಕೆಂದು ಆದೇಶಿಸಿರುವುದು ಜನತೆಗೆ ಮಾಡಿದ ಅನ್ಯಾಯವಾಗಿದೆ.

ರಾಜ್ಯ ಸರ್ಕಾರಕ್ಕೆ ಈ ಮೇಲಿನ ವಿಷಯ ಗೊತ್ತಿದ್ದರೂ ರಾಜ್ಯದ ಜನತೆ ಎಷ್ಟೇ ಬಾಯಿಬಡಿದುಕೊಂಡರೂ ಸಹ ಎಮ್ಮೆಯಂತೆ ವರ್ತಿಸುತ್ತಿದೆ. ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜನರಿಗೆ ದ್ರೋಹ ಮಾಡುತ್ತಿದೆ. ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ನೀರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತಮಿಳುನಾಡಿಗೆ ನೀರು ಬಿಡುವುದನ್ನು ಸ್ಥಗಿತ ಗೊಳಿಸಬೇಕು. ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿ ಇತ್ಯರ್ಥ ಪಡಿಸಬೇಕು. ಇಲ್ಲವಾದರೆ ಮುಂದಿನದಿನಮಾನಗಳಲ್ಲಿ ಪ್ರಾಣ ಹೋಗುವ ಹಂತದ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಳಿಕ ಈ ಕುರಿತು ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮುರಲೀಧರ ಮುಕ್ತೇದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಹಾಗೂ ತಾಲೂಕು ಸಂಘಟನೆಗಳ ಪದಾಧಿಕಾರಿಗಳಾದ ದೇವರಾಜ ಹಜಾಳ, ಲಕ್ಷ್ಮಣ ಹಾದಿಮನಿ, ರಮೇಶ ಕೆ., ನೀಲಪ್ಪ ಆಡಿನ, ಮುತ್ತು ಭಾವಿಕಟ್ಟಿ, ಹುಸೇನ್ ಆರ್ ಕಾಯಿಗಡ್ಡಿ, ಕಳಕೇಶ್ ನಾಯಕ್, ಶರಣು ನಾಯಕ್, ಖಾಜಾವಲಿ ಗಡದ್, ರಸೂಲ್ ರೌಡಕುಂದ, ಮನಸುರ ಗುಮುಗೆರಾ ಇತರರು ಹಾಜರಿದ್ದರು.