ಕುಷ್ಟಗಿ ಪುರಸಭೆ ವಾಣಿಜ್ಯ ಮಳಿಗೆಗಳು ಸೀಲ್ಡೌನ್!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಶುಕ್ರವಾರ ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಭೇಟಿ ನೀಡಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತಿದ್ದ ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳನ್ನು ಸೀಲ್ಡೌನ್ ಮಾಡಿಸಿದರು.

ಕಳೆದ ಹತ್ತು ವರ್ಷಗಳಿಂದ ಯಾವುದೇ ಬಾಡಿಗೆ ಕರಾರು ಪತ್ರವಿಲ್ಲದೇ ಪುರಸಭೆ ಮುಂಭಾಗದ ಮಟನ್ ಮಾರುಕಟ್ಟೆ ಮಾಂಸ ವ್ಯಾಪಾರ ಸೇರಿದಂತೆ ಸಂತೆ ಮಾರುಕಟ್ಟೆಯ ಒಳಾಂಗಣದ 17 ವಾಣಿಜ್ಯ ಮಳಿಗೆಗಳು ತರಕಾರಿ ವರ್ತಕರು ಸೇರಿದಂತೆ ಕೆಲ ಕಾಯಿಪಲ್ಯೆ ಮಾರಾಟಗಾರರು ಗೋಡೌನ್ನಾಗಿ ಪರಿವರ್ತಿಸಿಕೊಂಡಿದ್ದರು.

ಇಂದು ಏಕಾಏಕಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ನೇತೃತ್ವದ ಪುರಸಭೆ ಅಧಿಕಾರಿಗಳ ತಂಡ ದಿಢೀರ್ ಕಾರ್ಯಾಚರಣೆ ನಡೆಸಿ ಮಟನ್ ಮಾರುಕಟ್ಟೆ ಸೇರಿದಂತೆ ವಾಣಿಜ್ಯ ಮಳಿಗೆಗಳಲ್ಲಿನ ವಸ್ತುಗಳನ್ನು ತೆರವುಗೊಳಿಸಿ ಮಳಿಗೆಗಳನ್ನು ಸೀಲ್ಡೌನ್ ಮಾಡಿ ತಮ್ಮ ವಶಕ್ಕೆ ಪಡೆದರು. 

ದಿಢೀರ್ ಕಾರ್ಯಾಚರಣೆಯಿಂದ ವಿಚಲಿತಗೊಂಡ ಮಾಂಸ ವ್ಯಾಪಾರಿಗಳು ಹಾಗೂ ತರಕಾರಿ ವ್ಯಾಪಾರಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಮಳೆಗಾಲ ಇರುವುದರಿಂದ ಹಸಿ ತರಕಾರಿಗಳು ಹಾಳಾಗುತ್ತವೆ. ಶನಿವಾರ ಮದ್ಯಾಹ್ನ 12 ಗಂಟೆವರೆಗೆ ಕಾಲಾವಕಾಶ ನೀಡಿ ಖಾಲಿ ಮಾಡಿ ಕೊಡುತ್ತೇವೆ ಎಂದು ಅಂಗಲಾಚಿದರು.

ಕಾಲಾವಕಾಶ ನೀಡಿದ ಅಧಿಕಾರಿಗಳು, ಶೀಘ್ರದಲ್ಲೇ ಮಾರುಕಟ್ಟೆಯ 10 ಮಳಿಗೆಗಳಿಗೆ ವಿದ್ಯುತ್ ಸೌಲಭ್ಯ ಸೇರಿದಂತೆ ಮಟನ್ ಮಾರುಕಟ್ಟೆಯನ್ನು ಸುಣ್ಣಬಣ್ಣ ಲೇಪಿಸಲಾಗುತ್ತದೆ. ಬಳಿಕ 17 ವಾಣಿಜ್ಯ ಮಳಿಗೆಗಳು ಹಾಗೂ ಮಟನ್ ಮಾರುಕಟ್ಟೆ ಬಾಡಿಗೆ ನೀಡಲು ಹರಾಜು ಕರೆಯಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಿ ಅಧಿಕೃತವಾಗಿ ಮಳಿಗೆಗಳನ್ನು ಪಡೆದುಕೊಳ್ಳುವಂತೆ ವ್ಯಾಪಾರಸ್ಥರಿಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಪುರಸಭೆ ಜೆಇ, ಚಿರಂಜೀವಿ ದೊಡ್ಡಮನಿ, ಮೊಹಿನುದ್ದಿನ್ ವಂಟಿ, ವ್ಯವಸ್ಥಾಪಕ ಖತೀಬ್ ಸಾಬ್, ಕಂದಾಯ ನಿರೀಕ್ಷಕ ರಾಘವೇಂದ್ರ ಸೇರಿದಂತೆ ಪುರಸಭೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹಾಜರಿದ್ದರು.

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ, ಪುರಸಭೆ ಮಳಿಗೆಗಳಲ್ಲಿ ಅನಧಿಕೃತವಾಗಿ ಸಾಮಗ್ರಿಗಳನ್ನು ಸಂಗ್ರಹಿಸುವುದು, ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ ತಮಗೂ ಹಾಗೂ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಕುರಿತು ತಮ್ಮ ಗಮನಕ್ಕೂ ಇತ್ತು. ತಿಂಗಳ ಹಿಂದೆ ಪಟ್ಟಣಕ್ಕೆ ಭೇಟಿ ನೀಡಿ ತೆರವುಗೊಳಿಸುವಂತೆ ಅನಧಿಕೃತ ವ್ಯಾಪಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಇಂದು ಕಾರ್ಯಾಚರಣೆ ನಡೆಸಿ ಪುರಸಭೆ ವಶಕ್ಕೆ ಪಡೆಯಲಾಗಿದೆ. ಶೀಘ್ರದಲ್ಲೇ ಆನ್ಲೈನ್ ಹರಾಜು ಅಥವಾ ಬಹಿರಂಗ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.