ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಉಪ ನೋಂದಣಾಧಿಕಾರಿಗಳು ಬಿನ್ ಸೇತಿಗಿ(ಎನ್.ಎ.) ಜಾಗೆಯನ್ನು ಕೃಷಿ ಜಮೀನಾಗಿ ಪರಿವರ್ತಿಸಿ ಬೇರೆಯವರ ಹೆಸರಿಗೆ ನೋಂದಣಿ ಮಾಡಿ ಅಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಎಡವಟ್ಟಿಗೆ ಸಿಲುಕಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕಂದಕೂರು ಗ್ರಾಮದ ಪ್ರಭುಲಿಂಗಯ್ಯ ಮಠಪತಿ ಅವರ ತಂದೆ ನಿಂಗಯ್ಯ ತಂದಿ ಪರಯ್ಯ ಮಠಪತಿಯವರು ಕಂದಕೂರು ಸೀಮೆ ವ್ಯಾಪ್ತಿಯಲ್ಲಿ ಬರುವ ತಮಗೆ ಸೇರಿದ 20 ಗುಂಟೆ ಕೃಷಿ ಜಮೀನನ್ನು ಬಿನ್ ಸೇತಿಗಿ ಜಾಗೆಯನ್ನಾಗಿ ಪರಿವರ್ತಿಸಿಕೊಂಡು ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ಅಲ್ಲಿ 48×58 ಅಳತೆಯ 8 ನಿವೇಶನಗಳನ್ನು ರಚನೆ ಮಾಡಿ ಕಂದಕೂರು ಗ್ರಾಮಸ್ಥರಿಗೆ 1984ರಲ್ಲಿ ಮಾರಾಟ ಮಾಡಿದ್ದಾರೆ.
ಖರೀದಿಸಿದವರು ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳನ್ನು ಮೊಟೇಶನ್ ಮಾಡಿಸಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈಗ ಅದೇ 20 ಗುಂಟೆ ಜಾಗೆಯನ್ನು ವ್ಯಾಪಾರ ಮಾಡಿದ ವ್ಯಕ್ತಿಯ ಸೊಸೆ ಅಂದರೆ ಮಗನ ಹೆಂಡತಿ ಸಂಗಮ್ಮ ಗಂಡ ಪ್ರಭುಲಿಂಗಯ್ಯ ಮಠಪತಿ ಅವರು ಪಹಣಿಯಲ್ಲಿ ನಮೂದಾದ ಬಿನ್’ಶೆತ್ ಮರೆಮಾಚಿ ಖುಷ್ಕಿ ಜಮೀನು ಎಂದು ಕಂದಕೂರು ಗ್ರಾಮದ ಶರಣಬಸವ ರಾಮಣ್ಣ ಕುಟಗಮರಿ ಹಾಗೂ ನಾಗರಾಜ ಶರಣಪ್ಪ ಹೊಟ್ಟೇರ್ ಎಂಬುವವರ ಹೆಸರಿಗೆ ಕಳೆದ ತಿಂಗಳು 21ನೇ ಸೆಪ್ಟೆಂಬರ್ 2023ರಂದು ನೋಂದಣಿ ಮಾಡಿಸಿದ್ದಾರೆ.
ಕಚೇರಿಗೆ ಮುತ್ತಿಗೆ: ನೋಂದಣಿ ಸಮಯದಲ್ಲಿ ಉಪನೋಂದಣಿ ಇಲಾಖೆಯ ಅಧಿಕಾರಿಗಳು ಬಿನ್ ಸೇತಿಗಿ ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಕೃಷಿ ಜಮೀನು ಎಂದು ಬೇರೆಯವರಿಗೆ ನೋಂದಣಿ ಮಾಡಲು ಸಹಕರಿಸಿದ್ದಾರೆ. ಸದ್ಯ ಅಕ್ರಮವಾಗಿ ಜಮೀನು ಖರೀದಿಸಿದ ರೈತರು, ನಿವೇಶನ ಹಾಗೂ ಮನೆ ನಿರ್ಮಿಸಿಕೊಂಡ ನಿವಾಸಿಗಳಿಗೆ ಜಮೀನು ಖಾಲಿ ಮಾಡುವಂತೆ ಒಕ್ಕಲೆಬ್ಬಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ನಿವೇಶನ ಖರೀದಿಸಿದ್ದ ಉಪನೋಂದಣಿ ಅಧಿಕಾರಿಗಳ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ತಪ್ಪಿತಸ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರಿಪಡಿಸುವಂತೆ ಪಟ್ಟುಹಿಡಿದರು.
ಅಧಿಕಾರಿಗಳ ತಪ್ಪೊಪ್ಪಿಗೆ: ಕರ್ತವ್ಯದ ಒತ್ತಡದಲ್ಲಿ ನಜರಚುಕ್ಕಿಯಲ್ಲಿ ನೋಂದಣಿ ಕಾರ್ಯವಾಗಿದೆ. ಆಗ ನಾನು ರಜೆಯಲ್ಲಿದ್ದೆ. ಆಗ ರೇವತಿ ಎಂಬುವರು ಮಾಡಿದ್ದಾರೆ. ಇದನ್ನು ಸರಿಪಡಿಸಲು ಮೇಲಾಧಿಕಾರಿಗಳಿಂದ ಸಲಹೆ ಪಡೆಯಲಾಗುವುದು. ಅಲ್ಲದೆ ಮೋಸ ಮಾಡಿದ ಜಮೀನು ಮಾರಾಟಗಾರರ ವಿರುದ್ಧ ಕಾನೂನಾತ್ಮಕವಾಗಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪ್ರಭಾರ ಉಪ ನೋಂದಣಾಧಿಕಾರಿ ನಾಗೇಂದ್ರಪ್ಪ ಮಣೂರು ತಿಳಿಸಿದರು.
ಈ ವೇಳೆ ಕಂದಕೂರಿನ ಚೆನ್ನಮ್ಮ ಹನುಮಂತಪ್ಪ ಗುತ್ತೂರು, ಶಿವಪ್ಪ ಶರಣಪ್ಪ ಬಿಜಕಲ್, ಈರಪ್ಪ ಮಹಾಂತಪ್ಪ ಕಡಿವಾಲ, ಶರಣಪ್ಪ ಶಿಂಪಿಗೇರ. ಕಳಕಪ್ಪ ರುದ್ರಪ್ಪ ಕುಂಬಾರ, ಟಿ.ಬಸವರಾಜ, ಶರಣಪ್ಪ ಕಾಮನೂರು ಇತರರು ಇದ್ದರು.