ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯಲ್ಲಿ ₹1.430 ಕೋಟಿಯಷ್ಟು ಬೆಳೆ ಹಾನಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ನಳಿನಿ ಅತುಲ್ ಅವರು ಹೇಳಿದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಸೀಮಾ ವ್ಯಾಪ್ತಿಯ ರೈತ ಶರಣಪ್ಪ ಬಾರಕೇರ ಎಂಬುವರ ಜಮೀನಿಗೆ ಭೇಟಿ ನೀಡಿದ್ದ ಕೇಂದ್ರದ ಬರ ಅಧ್ಯಾಯನ ತಂಡಕ್ಕೆ ಜಮೀನಲ್ಲಿ ಈರುಳ್ಳಿ ಬೆಳೆ ಹಾಗೂ ಮೆಣಸಿನ ಬೆಳೆ ಹಾನಿಯಾಗಿರುವ ವಾಸ್ತವ ಸ್ಥಿತಿ ವಿವರಿಸಿದ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ಈಗಾಗಲೇ ವರದಿ ತಯಾರಿಸಿದ್ದು, ಸುಮಾರು ₹240 ಕೋಟಿ ಪರಿಹಾರ ಬಿಡುಗಡೆಗೆ ಕೇಂದ್ರ ಬರ ಅಧ್ಯಯನ ಅಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಪ್ರತಿ ಹೆಕ್ಟೇರ್ ಖುಷ್ಕಿ ಭೂಮಿಗೆ ₹8.500, ನೀರಾವರಿ ಭೂಮಿಗೆ ₹17.000 ಪರಿಹಾರ ದೊರೆಯಲಿದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು, ಜಿಲ್ಲೆಯಲ್ಲಿ ಅಗತ್ಯ ಮೇವಿನ ಬ್ಯಾಂಕುಗಳ ಸ್ಥಾಪನೆ ಕುರಿತು ಬರ ಅಧ್ಯಯನ ತಂಡಕ್ಕೆ ಮನವಿ ಮಾಡಲಾಗಿದೆ. ಕಳೆದ ಮೂರು ತಿಂಗಳು ಮಳೆ ಕೊರತೆಯಿಂದ ಖುಷ್ಕಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿದೆ. ಬಳಿಕ ತಿಂಗಳ ಹಿಂದೆ ಅಲ್ಲಲ್ಲಿ ಮಳೆಯಾಗಿದೆ. ಆದರೆ, ಇಳುವರಿ ಬಂದಿಲ್ಲ ಎಂಬುದರ ಕುರಿತು ಬರ ಅಧ್ಯಯನ ತಂಡಕ್ಕೆ “ಹಸಿರು ಬರ” ಎಂದು ಮನವರಿಕೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆಗೆ ತಂಡಗಳನ್ನು ರಚಿಸಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ಮುಂದಿನ ಮೂರು ತಿಂಗಳು ಅವಧಿ ವರೆಗೆ ಕುಡಿಯುವ ನೀರು ನಿರ್ವಹಣೆಗೆ ಗ್ರಾಮೀಣ ಭಾಗಕ್ಕೆ ₹10 ಕೋಟಿ, ನಗರ ಪ್ರದೇಶಕ್ಕೆ ₹7 ಕೋಟಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ವರದಿ ಮೂಲಕ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕೇಂದ್ರದ ಬರ ಅಧ್ಯಯನ ತಂಡದ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಸೇರಿದಂತೆ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ, ತಾ.ಪಂ.ಇಓ ನಿಂಗಪ್ಪ ಎಂ.ಎಸ್., ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಸಹಾಯಕ ನಿರ್ದೇಶಕ ದುರ್ಗಾಪ್ರಸಾದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.