ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಅವೈಜ್ಞಾನಿಕ : ಜನ ಅಸಮಾಧಾನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ 6 ಮತ್ತು 7ನೇ ವಾರ್ಡಗಳಿಗೆ ಸಂಬಂಧಿಸಿದ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ಮುಂದುವರೆದರೂ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿನ ಮಾರುತಿ ವೃತ್ತದಿಂದ ಕನಕದಾಸ ವೃತ್ತದ ವರೆಗಿನ ರಾಜ್ಯ ಹೆದ್ದಾರಿಯ ಬದಿ ಕೈಗೊಂಡಿರುವ ಪೇವರ್ಸ್ ಜೋಡಣೆ ಕಾಮಗಾರಿ ಜೊತೆಗೆ ಕುಡಿಯುವ ನೀರು ಪೂರೈಕೆಗಾಗಿ ಅಳವಡಿಸುತ್ತಿರುವ ಮುಖ್ಯ ಪೈಪ್ಲೈನ್ ಇದಾಗಿದೆ.
ತಿಂಗಳ ಹಿಂದೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕನಿಷ್ಠ ಎರಡು ಅಡಿ ಆಳದಲ್ಲಿ ಪೈಪ್ಲೈನ್ ಅಳವಡಿಸದೇ ಒಂದು ಅಡಿಗೂ ಕಡಿಮೆ ಆಳದಲ್ಲಿ ಪ್ಲಾಸ್ಟಿಕ್ ಪೈಪು ಅಳವಡಿಸುತ್ತಿರುವುದನ್ನು ಗಮನಿಸಿದ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಭಾರಿ ವಾಹನಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು, ಪೈಪ್ಲೈನ್ ಒಡೆದುಹೊತ್ತದೆ. ಅವೈಜ್ಞಾನಿಕ ಕಾಮಗಾರಿ ನಡೆಸದಂತೆ ಅಡ್ಡಿಪಡಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಪುರಸಭೆ ಮುಖ್ಯಾಧಿಕಾರಿ ಸಂಪೂರ್ಣ ಕಾಮಗಾರಿಯನ್ನು ವೈಜ್ಞಾನಿಕವಾಗಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ, ಮಾರುತಿ ವೃತ್ತದಿಂದ ಕನಕದಾಸ ವೃತ್ತದ ವರೆಗಿನ ಮಾರ್ಗಮಧ್ಯೆ ಟಿಎಪಿಸಿಎಂಎಸ್ ಸೊಸಾಯಿಟಿ ಮುಂದಿನಿಂದ ಸುಮಾರು 60 ಅಡಿ ಉದ್ದ ಮಾತ್ರ ಎರಡು ಅಡಿ ಆಳದಲ್ಲಿ ಗುತ್ತಿಗೆದಾರರು ಪೈಪ್ಲೈನ್ ಅಳವಡಿಸಿದ್ದಾರೆ.

ರಸ್ತೆ ಬದಿ ಫೇವರ್ಸ ಅಳವಡಿಸುತ್ತಿರುವುದರಿಂದ ಸಧ್ಯ ಗುತ್ತಿಗೆದಾರರು ತರಾತುರಿಯಲ್ಲಿ ಮೇಲ್ಮೈ ಮಣ್ಣುಮುಚ್ಚಿ ಅರೆಬರೆ ಕಾಮಗಾರಿ ಮುಗಿಸಿ ಕೈತೊದುಕೊಳ್ಳಲು ಮುಂದಾಗಿದ್ದಾರೆ. ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕಾದ ಪುರಸಭೆ ಮುಖ್ಯಾಧಿಕಾರಿ ಹಾಗೂ ಜೆಇ ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂಬಂಧಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ಧೇಶಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ದಿನ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರನ್ನು ಪೋನ್ ಕರೆ ಮೂಲಕ ವಿಚಾರಿಸಿದಾಗ ಬೆನ್ನು ನೋವಿನಿಂದ ಪರಿಣಾಮ ಬೀರಿದ್ದು, ವಿಶ್ರಾಂತಿ ಪಡೆಯುತ್ತಿರುವೆ. ಇಂಜಿನಿಯರ ಶಿಲ್ಪಾ ಅವರನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯೆ ನೀಡಿದರು. ಪುರಸಭೆ ಇಂಜಿನಿಯರ್ ಶಿಲ್ಪಾ ಅವರು ಫೋನ್ ಕರೆ ಸ್ವೀಕರಿಸದೇ ಮೆಸೇಜ್ ಮೂಲಕ ಮೀಟಿಂಗ್’ಲ್ಲಿ ಇರುವುದಾಗಿ ತಿಳಿಸಿದರು.

ಸೆ. 29 ರಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಅವರು ಪಟ್ಟಣಕ್ಕೆ ಭೇಟಿನೀಡಲಿದ್ದು, ಅವರ ಗಮನಕ್ಕೆ ತಂದು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ತಮ್ಮನ್ನು ಕರೆಸುತ್ತೇವೆ ಎಂದ ಮುಖ್ಯಾಧಿಕಾರಿ ಅಧಿಕಾರಿ ಭೇಟಿ ನೀಡಿರುವ ವಿಷಯ ತಮ್ಮ ಗಮನಕ್ಕೆ ತಂದಿಲ್ಲ. ಅವೈಜ್ಞಾನಿಕ ಕಾಮಗಾರಿ ಮುಂದುವರೆದಿದೆ.

– ರಾಮಣ್ಣ ಬಿನ್ನಾಳ
ಪುರಸಭೆ ಸದಸ್ಯರು 6ನೇ ವಾರ್ಡ ಕುಷ್ಟಗಿ.