ಅವೈಜ್ಞಾನಿಕ ಪೈಪ್ಲೈನ್ ಕಾಮಗಾರಿ ಸ್ಥಳಕ್ಕೆ ಪುರಸಭೆ ಜೆಇ ಭೇಟಿ, ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ 6 ಮತ್ತು 7ನೇ ವಾರ್ಡಗಳಿಗೆ ಸಂಬಂಧಿಸಿದ ಕುಡಿಯುವ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಅವೈಜ್ಞಾನಿಕ ಕಾಮಗಾರಿ ಸ್ಥಳಕ್ಕೆ ಪುರಸಭೆ ಜೆಇ ಶಿಲ್ಪಾ ಜಿ. ಅವರು ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.

ಮಾರುತಿ ವೃತ್ತದಿಂದ ಕನಕದಾಸ ವೃತ್ತದ ದ್ವಾರಕಾ ಹೋಟೆಲ್ ವರೆಗೆ ಪುರಸಭೆಯ 15ನೇ ಹಣಕಾಸು ಯೋಜನೆಯಡಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿರುವುದನ್ನು ಕಂಡು ಸಾರ್ವಜನಿಕರು ದೂರು ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಕುರಿತು ಇಂದು ಜೆಇ ಶಿಲ್ಪಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ 6ನೇ ವಾರ್ಡ ಪುರಸಭೆ ಸದಸ್ಯ ರಾಮಣ್ಣ ಬಿನ್ನಾಳ ಅವರು ಕಳಪೆ ಕಾಮಗಾರಿ ಕುರಿತು ವಿವರಿಸಿದರು. ಕನಿಷ್ಠ ಎರಡು ಅಡಿ ಆಳದಲ್ಲಿ ಪೈಪ್ಲೈನ್ ಅಳವಡಿಸದೇ ಅರ್ದ ಅಡಿ ಆಳದಲ್ಲಿ ಪ್ಲಾಸ್ಟಿಕ್ ಪೈಪು ಅಳವಡಿಸಲಾಗಿದ್ದು, ಅದರಮೇಲೆ ತರಾತುರಿಯಲ್ಲಿ ಫೇವರ್ಸ ಅಳವಡಿಸಿ ಗುತ್ತಿಗೆದಾರರು ಕೈತೊಳೆದುಕೊಳ್ಳುತಿದ್ದಾರೆ. ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪಟ್ಟುಹಿಡಿದರು.

ಪೈಪ್ಲೈನ್ ಅಳವಡಿಕೆ ಕಾಮಗಾರಿ ಸಬ್ ಗುತ್ತಿಗೆದಾರರು ನಿರ್ವಹಿಸುತ್ತಿರುವುದರಿಂದ ರಾತ್ರೋರಾತ್ರಿ ಪೈಪ್ಲೈನ್ ಅಳವಡಿಸಿದ್ದಾರೆ. ಮಾರುತಿ ವೃತ್ತದಿಂದ ಕನಕದಾಸ ವೃತ್ತ ದ್ವಾರಕಾ ಹೋಟೇಲ್ ವರೆಗೂ 30 ಅಡಿ ಅಂತರಕ್ಕೊಮ್ಮೆ ಪೈಪ್ಲೈನ್ ಅಳವಡಿಕೆಯ ಆಳವನ್ನು ಪರಿಶೀಲನೆ ನಡೆಸಲಾಗುವುದು. ಅಂದಾಜು ಪಟ್ಟಿ ಪ್ರಕಾರ ಪೈಪ್ಲೈನ ಅಳವಡಿಸದಿರುವುದು ಕಂಡುಬಂದರೆ ಮರು ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿ ಕ್ರಮ ಜರುಗಿಸಲಾಗುವುದು ಎಂದು ಜೆಇ ಶಿಲ್ಪಾ ಜಿ. ಅವರು ತಿಳಿಸಿದ್ದಾರೆ. ಸಧ್ಯ ಎರಡುದಿನ ಕಾಮಗಾರಿ ಸ್ಥಗಿತಗೊಳಿಸುವಂತೆ ಫೇವರ್ಸ ಅಳವಡಿಸುತ್ತಿರುವ ಕೆಲಸಗಾರರಿಗೆ ಸೂಚನೆ ನೀಡಿ ತೆರಳಿದರು.

ಆದರೆ, ಪುರಸಭೆ ಜೆಇ ಸ್ಥಳಕ್ಕೆ ಭೇಟಿ ನೀಡಿ ಸೂಚಿಸಿದರೂ ಸಹ ಫೇವರ್ಸ ಅಳವಡಿಕೆ ಮಾತ್ರ ಮುಂದುವರೆದಿದೆ.