ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತಿದ್ದು, ಅದರ ಬಗ್ಗೆ ಅರಿವು ಮೂಡಿಸಲು ಪಟ್ಟಣದಲ್ಲಿ ತಾಲೂಕಾಡಳಿತದ ವತಿಯಿಂದ ಮಂಗಳವಾರ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ಮಲ್ಲಯ್ಯ ವೃತ್ತದಿಂದ ಆರಂಭಗೊಂಡ ಕರ್ನಾಟಕ ಈಶಾನ್ಯ ಪದವೀಧರ ಮತದಾರರ ಪಟ್ಟಿ ಸೇರ್ಪಡೆ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಅವರು ಚಾಲನೆ ನೀಡಿದರು. ಈಶಾನ್ಯ ರಾಜ್ಯ ಸಾರಿಗೆ ಸಂಸ್ಥೆಯ ಕೇಂದ್ರೀಯ ಬಸ್ ನಿಲ್ದಾಣ ಮಾರ್ಗವಾಗಿ, ಮಾರುತಿ ವೃತ್ತ, ಬಸವೇಶ್ವರ ವೃತ್ತ ವರೆಗೆ ಜಾಗೃತಿ ಜಾಥಾ ನಡೆಯಿತು. ಜಾಥಾದಲ್ಲಿ ತಾಲೂಕು ಪಂಚಾಯಿತಿ, ಪುರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರ ಸಿಬ್ಬಂದಿ ಪಾಲ್ಗೊಂಡಿದ್ದರು.
ಬಸವೇಶ್ವರ ವೃತ್ತ ಬಳಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಈಶಾನ್ಯ ಪಧವಿಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕುಷ್ಟಗಿ ತಾಲೂಕಿನಲ್ಲಿ 1ನೇ ನವೆಂಬರ್ 2020ಕ್ಕಿಂತ ಮುಂಚೆ ಪದವಿ ಪೂರ್ಣಗೊಳಿಸಿದ ಅರ್ಹ ಮತದಾರರಿಗೆ ಮತದಾರ ಪಟ್ಟಿಯಲ್ಲಿ ನೋಂದಣಿಗೆ ಅವಕಾಶವಿದ್ದು, ಇದೇ ದಿನಾಂಕ ನವೆಂಬರ್ 06. 2023ರ ಒಳಗಾಗಿ ತಹಶೀಲ್ದಾರವರ ಕಾರ್ಯಾಲಯದಲ್ಲಿ ನಮೂನೆ 18 ರ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಾದ 03 ವರ್ಷದ ಅಂಕಪಟ್ಟಿ ಅಥವಾ ಘಟಿಕೋತ್ಸವ ಪ್ರಮಾಣಪತ್ರ ಅಥವಾ ತಾತ್ಕಾಲಿಕ ಪ್ರಮಾಣಪತ್ರ, ಎರಡು (PASSPORT SIZE) ಭಾವಚಿತ್ರ, ಆಧಾರ ಕಾರ್ಡ ಅಥವಾ ಚುನಾವಣಾ ಗುರುತಿನ ಚೀಟಿಯನ್ನು ಸ್ವಯಂ ದೃಢೀಕೃತ ಮತ್ತು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸುವ ಮೂಲಕ ಮತದಾನದ ಹಕ್ಕು ಪಡೆದು ಪ್ರಜಾಪ್ರಭುತ್ವ ಬುನಾದಿ ಗಟ್ಟಿಗೊಳಿಸಲು ಕೋರಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಎಸ್.ಮುಸಳಿ ಅವರು ಮಾತನಾಡಿ, ತಾಲೂಕಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಜಾಗೃತಿ ಜಾಥಾ ಅಷ್ಟೇ ಅಲ್ಲದೆ ವಿಭಿನ್ನವಾಗಿ ವಿವಿಧ ಕಾರ್ಯಕ್ರಮ ಆಯೋಜಿಸುವ ಮುಖಾಂತರ ನೂತನ ಪಧವಿಧರರಿಗೆ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿ ಸೇರ್ಪಡೆಗೆ ಜಾಗೃತಿ ಮೂಡಿಸಲಾಗುತ್ತಿದ್ದು, ನೂತನ ಪದವವೀಧರರು ಮತದಾನ ನೋಂದಣಿಗೆ ಮುಂದಾಗಬೇಕು ಎಂದು ತಿಳಿಸಿದರು.