ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕು ಹೂಲಗೇರಾ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.
15 ಜನ ಸದಸ್ಯರ ಬಲ ಹೊಂದಿರುವ ಈ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರ ಹಿನ್ನೆಲೆ ಕವಿತಾ ಆರ್.ಚವ್ಹಾಣ ಅವರು ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನ ಬಯಸಿ ಮಹಿಬೂಬಸಾಬ ಹುಸೇನಸಾಬ ಉಂಡಿ ಹಾಗೂ ಶಾಂತಮ್ಮ ಶಂಕರಗೌಡ ಕುಂಟಗೌಡ ಎಂಬುವರಿಂದ ಎರಡು ನಾಮಪತ್ರ ಸಲ್ಲಿಕೆಯಾಗಿದ ಹಿನ್ನೆಲೆ ಮತದಾನ ನಡೆಯಿತು. 8 ಮತಗಳನ್ನು ಪಡೆಯುವುದರ ಮೂಲಕ ಶಾಂತಮ್ಮ ಶಂಕರಗೌಡ ಕುಂಟಗೌಡರ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ಘೋಷಣೆ ಮಾಡಿದ್ದಾರೆ.
ಸಹಾಯಕ ಚುನಾವಣಾಧಿಕಾರಿಯಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಎಲಿಗಾರ ಅವರು ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸರ್ವ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿ ಮತ್ತು ಸಾರ್ವಜನಿಕರು ಗೌರವಿಸಿದರು.