ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ₹5.00 ಲಕ್ಷ ಹೆಚ್ಚಳ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ನರೇಗಾ ಯೋಜನೆಯಡಿ ಪ್ರತಿ ಫಲಾನುಭವಿಗೆ (ಪ್ರತಿ ಆರ್ಹ ಕುಟುಂಬಕ್ಕೆ ನೀಡಬಹುದಾದ ವೈಯಕ್ತಿಕ ಕಾಮಗಾರಿಗಳ ಗರಿಷ್ಟ ಮೊತ್ತದ ಮಿತಿಯನ್ನು ₹2.50 ಲಕ್ಷಗಳಿಂದ ₹5.00 ಲಕ್ಷಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.

“ಯೋಜನೆಯಡಿ ನೊಂದಾಯಿತವಾದ ಒಂದು ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5.00 ಲಕ್ಷಗಳವರೆಗೆ ಯೋಜನೆಯಡಿ ನೀಡಲಾಗುವ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು” ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಲು ಪಡೆಯಬೇಕಾದರೆ ಕಡ್ಡಾಯವಾಗಿ ಜಾಬ್ ಕಾರ್ಡ ಹೊಂದಿರಬೇಕು. ಕುಟುಂಬದಲ್ಲಿ ಒಬ್ಬ ಸದಸ್ಯ ಕಡ್ಡಾಯವಾಗಿ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ-ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಇವುಗಳಲ್ಲಿ ಯಾವುದಾದರೂ ಒಂದು ವರ್ಗದಲ್ಲಿ ಅರ್ಹರಾಗಿರಬೇಕು. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ ತಿಳಿಸಿದ್ದಾರೆ.