ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಶೈಕ್ಷಣಿಕವಾಗಿ ಪ್ರಗತಿಹೊಂದಿ ವಿವಿಧ ಉನ್ನತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 6 ಜನ ಸ್ಪೂರ್ತಿದಾಯಕರಿಗೆ ದಿನಾಂಕ 24-10-2023ರಂದು ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ನಾಗರಿಕ ಸಮ್ಮಾನ ಲಭಿಸಿದೆ.
ನಗರದ ಪಲ್ಲೇದವರ ಓಣಿಯಲ್ಲಿ ಶ್ರೀಬಸವೇಶ್ವರ ಸೇವಾ ಸಮಿತಿ ಹಾಗೂ ನವರಾತ್ರಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ. ಕಳೆದೆರಡು ದಶಕದಿಂದ CRPF ಯೋಧರಾಗಿ ದೇಶ ಸೇವೆಯಲ್ಲಿರುವ ರಾಷ್ಟ್ರಪತಿ ಪದಕ ವಿಜೇತ ಮೌಲಾ ಹುಸೇನ್ ಹ್ಯಾಟಿ, ನ್ಯಾಯವಾದಿ, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸಜ್ಜನ, ಕಳೆದ 20 ವರ್ಷಗಳಿಂದ ಪೊಲೀಸ್ ಇಲಾಖೆಯ ಸೇವೆಯಲ್ಲಿರುವ ಪೇದೆ ಸಂಸದ ಸಂಗಣ್ಣ ಕರಡಿ ಅವರ ಅಂಗರಕ್ಷಕ ವಿಜಯಕುಮಾರ ಜಂತಕಲ್, ನಗರಸಭೆಗೆ ಸದಸ್ಯರಾಗಿ ಸತತ ಎರಡು ಬಾರಿ ಆಯ್ಕೆಯಾಗಿ ಜನಸೇವೆಯಲ್ಲಿರುವ ಚನ್ನಪ್ಪ ಕೋಟ್ಯಾಳ್, ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕನಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸಿ ಸದ್ಯ ವ್ಯವಸ್ಥಾಪಕರಾಗಿರುವ ಮಲ್ಲಿಕಾರ್ಜುನ ಸಿದ್ನೇಕೊಪ್ಪ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿರುವ ಡಾ.ಐಶ್ವರ್ಯ ಸಜ್ಜನ್ ಅವರನ್ನು ಗೌರವಿಸಲಾಯಿತು.
ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಪಲ್ಲೇದವರ ಓಣಿ ಹಾಗೂ ತಗ್ಗಿನಕೇರಿಯಲ್ಲಿ ಜನಿಸಿ ಶಿಕ್ಷಣ ಪಡೆದು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಆರು ಜನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಯುವಜನತೆ ಇವರಂತೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಬೇಕು. ನಮ್ಮ ಜಿಲ್ಲೆಗೆ ಕೀರ್ತಿತರಬೇಕು ಎಂದ ಸಂಸದರು, ಯುವಕರಲ್ಲಿ ಸ್ಪೂರ್ತಿ ತುಂಬುವ ಪರಿಕಲ್ಪನೆ ಇಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವ ಶ್ರೀ ಬಸವೇಶ್ವರ ಸೇವಾ ಸಮಿತಿ ಹಾಗೂ ನವರಾತ್ರಿ ಉತ್ಸವ ಸಮಿತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಲ್ಲೇದಾರ ಓಣಿ ಹಾಗೂ ತಗ್ಗಿನಕೇರಿಯ ಜನಪ್ರತಿನಿಧಿಗಳು, ಮುಖಂಡರು, ನಿವಾಸಿಗಳು ಭಾಗಿಯಾಗಿದ್ದರು.