ಪದವಿ ಮುಗಿಸಿದವರು ಕಡ್ಡಾಯ ನೋಂದಣಿ ಮಾಡಿಸಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಪದವಿ ಮುಗಿಸಿದವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ತಾಲೂಕು ಸ್ವಿಪ್ ಸಮಿತಿಯಿಂದ ಜಿಲ್ಲೆಯ ಕುಷ್ಟಗಿ ತಾಲೂಕು ಕೇಂದ್ರದಲ್ಲಿ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.

ಇಲ್ಲಿಯ ಮಾರುತಿ ವೃತ್ತದಿಂದ ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ ಮಾರ್ಗವಾಗಿ ಪುರಸಭೆ ಕಾರ್ಯಾಲಯದ ವರೆಗೆ ನಡೆದ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಕುರಿತು ಮತದಾರರ ವಿಶೇಷ ನೋಂದಣಿ ಅಭಿಯಾನ ಜಾಗೃತಿ ಜಾಥಾದಲ್ಲಿ  ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ನೌಕರ ಸಿಬ್ಬಂದಿ ಪದವಿ ಮುಗಿಸಿದವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆʼ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ತಾ.ಪಂ. ಇಓ ನಿಂಗಪ್ಪ ಎಸ್ ಮುಸಳಿ ಅವರು, 2020ರ ನ.1ಕ್ಕಿಂತ ಒಳಗೆ ಪದವಿ ಪೂರ್ಣಗೊಳಿಸಿದವರು ಇನ್ನೂ ನೋಂದಣಿ ಮಾಡಿಸದೇ ಉಳಿದುಕೊಂಡಿದ್ದು, ಕಡ್ಡಾಯವಾಗಿ ನಮೂನೆ 18 ರ ಅರ್ಜಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು ಎಂದರು.

ಪದವಿ ಪೂರ್ಣಗೊಳಿಸಿರುವ ಅಂಕಪಟ್ಟಿ, ಮತದಾರ ಗುರುತಿನ ಚೀಟಿ, ವಾಸಸ್ಥಳ, ಎರಡು ಭಾವಚಿತ್ರ, ಆಧಾರ್ ಪ್ರತಿ ದಾಖಲೆಗಳನ್ನು 6-11-2023ರೊಳಗೆ ಅರ್ಜಿ ಸಲ್ಲಿಸಬೇಕು. ನೋಂದಣಿ ಪ್ರಕ್ರಿಯೆಯಿಂದ ಯಾರು ವಂಚಿತಗೊಳ್ಳಬಾರದು ಎಂದ ಅವರು, ವಿವಿಧ ಕಾಲೇಜುಗಳಿಗೆ ಮೇಲ್ವಿಚಾರಕ ಅಧಿಕಾರಿಗಳ ತಂಡಗಳನ್ನು ನೇಮಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಗ್ರೇಡ್-2 ತಹಸೀಲ್ದಾರ್ ಮುರಲೀಧರ ಮುಕ್ತೇದಾರ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ತಾ ಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸ್’ಪಾಟೀಲ್, ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ನಿಂಗನಗೌಡ ವಿ ಹಿರೇಹಾಳ, ತಾ ಪಂ ಅಧಿಕಾರಿವರ್ಗ, ಪುರಸಭೆ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ, ಸಿಡಿಪಿಓ, ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಅಧಿಕಾರಿಗಳು, ತಹಸಿಲ್ದರ್ ಕಚೇರಿ ಸಿಬ್ಬಂದಿ ವರ್ಗ ಹಾಗೂ ಇತರರು ಇದ್ದರು.