ಬರದ ಛಾಯೆಗೆ ಅಣುಕಿಸಿದ 50ನೇ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಕರ್ನಾಟಕ ರಾಜ್ಯೋತ್ಸವ ಹಾಗೂ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡು 50 ವರ್ಷಗಳನ್ನು ಪೂರೈಸಿದ ಸುವರ್ಣ ಮಹೋತ್ಸವ ಪ್ರಯುಕ್ತ ನಾಡಿನಾದ್ಯಂತ ಈ ದಿನವನ್ನು ಸಂಭ್ರಮ ಆಚರಿಸಲು ರಾಜ್ಯ ಸರ್ಕಾರ ಕರೆಕೊಟ್ಟಿದೆ. ಆದರೆ, ತೀರಾ ಬರಪೀಡಿತ ಪ್ರದೇಶವೆಂದು ಘೋಷಣೆಯಾದ ಕುಷ್ಟಗಿ ತಾಲೂಕಿನ ಬರದ ಛಾಯೆಗೆ ಈ ಸಂಭ್ರಮ ಅಣುಕಿಸುತಿತ್ತು.

ಈ ನಿಟ್ಟಿನಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ತಾಲೂಕಾಡಳಿತದಿಂದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ತಾಯಿ ಭುವನೇಶ್ವರಿ ಭಾವಚಿತ್ರ ಇರಿಸಿದ ಸಾರೋಟಿನ ಮೆರವಣಿಗೆಗೆ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಚಾಲನೆ ನೀಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ತೆರೆದ ವಾಹನದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರ ಚೆನ್ನಮ್ಮ, ಒಣಕೆ ಓಬವ್ವ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಅನೇಕ ಹೋರಾಟಗಾರರು, ಶರಣರು, ಸಂತರು ಹಾಗೂ ಭಾರತಾಂಬೆಯ ಛದ್ಮವೇಷದಲ್ಲಿ ಸಾರ್ವಜನಿಕರ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ನಡೆದ ಜಾಥಾದಲ್ಲಿ ಕನ್ನಡ ಪರ ಘೋಷಣೆಗಳು ಮೊಳಗಿದವು. ಹಳದಿ ಬಿಳಿ, ಕೆಂಪು ಸಮವಸ್ತ್ರ ಧರಿಸಿದ ಕಂದಾಯ ಇಲಾಖೆ ನೌಕರ ಸಿಬ್ಬಂದಿ ಹಾಗೂ ವಿವಿಧ ಇಲಾಖೆ ತಾಲೂಕುಮಟ್ಟದ ಅಧಿಕಾರಿಗಳು, ನೌಕರ ಸಿಬ್ಬಂದಿ ವರ್ಗ ಹಾಗೂ ಶಾಲಾಮಕ್ಕಳ ದಂಡು ಹೆಜ್ಜೆ ಹಾಕಿತು. ತಾಲೂಕು ಕ್ರೀಡಾಂಗಣದಿಂದ ಹೈದರಲಿ ವೃತ್ತ, ಕೋಕಿಲ ವೃತ್ತ, ಬಸವೇಶ್ವರ ವೃತ್ತ, ಮಾರುತಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತ ಬಳಿ ಜಾಥಾ ಸಮಾಪ್ತಿಯಾಯಿತು.

ವೃತ್ತದ ಬಳಿ ಸ್ವತಃ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ವರನಟ ಡಾ.ರಾಜಕುಮಾರ ಅವರು ಹಾಡಿರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ನಾಡಗೀತೆಯೊಂದಿಗೆ ನೃತ್ಯಮಾಡಿ ಕಂದಾಯ ಇಲಾಖೆ ಸಿಬ್ಬಂದಿ ಹುರಿದುಂಬಿಸಿ ಕುಣಿದು ಕುಪ್ಪಳಿಸಿದ್ದು, ಸಂಭ್ರಮಕ್ಕೆ ಮತ್ತಷ್ಟು ಮೆರಗುತಂದಿತು.

ನಂತರ ಸಂಜೆ ತಾಲೂಕು ಕ್ರೀಡಾಂಗಣದಲ್ಲಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರ ಸಮ್ಮುಖದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ತಾಲೂಕುಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಕಸಾಪ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಳದಿ, ಕೆಂಪು ವರ್ಣದ ಪಟ ಹಾರಿಸಿ ಪುಟಾಣಿಗಳೊಂದಿಗೆ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಬಳಿಕ ಸಂಜೆ ಏಳುಗಂಟೆ ಸುಮಾರಿಗೆ ಕರ್ನಾಟಕ ನಕಾಶೆ ಸೇರಿದಂತೆ ವರ್ಣರಂಜಿತ ರಂಗೋಲಿ ಚಿತ್ತಾರ ಬಿಡಿಸಿದ್ದ ತಾಲೂಕಾಡಳಿತ ಕಚೇರಿ ಪ್ರಾಂಗಣದಲ್ಲಿ ಮಹಿಳೆ ಹಾಗೂ ಪುರುಷ ನೌಕರ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನೂರಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಫೋಟೋ ಕೃಪೆ: ಅಂತರ್ಜಾಲ ತಾಣ

ಕುಷ್ಟಗಿ ಸೇರಿದಂತೆ ರಾಜ್ಯದ 195 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಧ್ಯೆ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮಾಚರಣೆ ಬರದ ಪರಿಸ್ಥಿತಿ ಮಧ್ಯೆ ಎಷ್ಟು ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆ. ಒಟ್ಟಾರೆ, ಈ ಸಂಭ್ರಮ ಬರದ ಪರಿಸ್ಥಿತಿಯನ್ನು ಅಣುಕಿಸಿದಂತಿತ್ತು ಎನ್ನಬಹುದು.