ಆಂಗ್ಲ ಭಾಷೆ ವ್ಯಾಮೋಹಕ್ಕೆ ತಾಯಿ ಭಾಷೆ ಕಡೆಗಣಿಸುತಿದ್ದೇವೆ : ಶಾಸಕ ಡಿ.ಹೆಚ್. ಪಾಟೀಲ್ ಕಳವಳ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ತಾಯಿ ಭಾಷೆಯನ್ನು ಕಡೆಗಣಿಸುತ್ತೇವೆ ಎಂಬ ಎಲ್ಲೋ ಒಂದುಕಡೆ ಕಲ್ಪನೆ ಬರುತ್ತಿದೆ ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.

ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ತಾಲೂಕಾಡಳಿತದಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕಳವಳ ವ್ಯಕ್ತಪಡಿಸಿದರು. ಕನ್ನಡದ ಮೇಲೆ ಕನ್ನಡ ಭಾಷಿಕರ ಮೇಲೆ ದಬ್ಬಾಳಿಕೆ ಗದಪ್ರಹಾರ ಪ್ರಸ್ತುತವಿದೇ. ಆಗಿನ ಕಾಲಘಟ್ಟದಲ್ಲಿ ಕನ್ನಡದ ಮೇಲೆ ಸಂಸ್ಕೃತ ದಾಳಿ ಮಾಡಿದರೆ’ ಈಗಿನ ಕಾಲಘಟ್ಟದಲ್ಲಿ ಆಂಗ್ಲ ದಾಳಿ ಮಾಡುತ್ತಿರುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಕನ್ನಡ ಶಾಲೆಯ ಪ್ರತಿಭಾವಂತ ಮಕ್ಕಳನ್ನು ಗೌರವಿಸುವ ಮುಖಾಂತರ ಕನ್ನಡವನ್ನು ನಾವು ಪ್ರೋತ್ಸಾಹಿಸಬೇಕು. ಈ ನೆಲ ಜಲ, ಅನ್ನ ನೀಡುವ ಕನ್ನಡ ಭಾಷೆಯನ್ನು ಬೆಳೆಸಲು ಉತ್ತೇಜಿಸಬೇಕು. ಆನ್ಯ ಭಾಷೆಗಳು ನಮ್ಮಲ್ಲಿರಲಿ. ಆದರೆ, ಅದರ ಜೊತೆಗೆ ನಮ್ಮ ತಾಯಿ ಭಾಷೆಗೆ ನಾವು ಮಹತ್ವ ಕೊಡಬೇಕು ಎಂಬ ಜವಾಬ್ದಾರಿ ನಮ್ಮಲ್ಲಿರಲಿ ಎಂದು ಮನವಿ ಮಾಡಿದರು. ಬೆಂಗಳೂರು ನಗರ ಪ್ರದೇಶದಲ್ಲಿ ಅರ್ಧದಷ್ಟು ಅನ್ಯಭಾಷಿಕರು ತುಂಬಿದ್ದಾರೆ. ಎನ್ನಡ, ಎಕ್ಕಡ, ಮಧ್ಯೆ ಎಲ್ಲೂ ಕಾಣುತ್ತಿಲ್ಲ ನಮ್ಮ ಕನ್ನಡ ಎನ್ನುವಂತಾಗಿದೆ. ಅದೆಲ್ಲವನ್ನೂ ಒಡೆದೋಡಿಸಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ರೀತಿಯಲ್ಲಿ ನಾವು ಬದುಕಬೇಕು. ಎಲ್ಲರೂ ಕೂಡಾ ತಾಯಿ ಭಾಷೆಯನ್ನು ತಾಯಿ ನಾಡನ್ನು ಪ್ರೀತಿಸಬೇಕು, ಆರಾಧಿಸಬೇಕು ನಮ್ಮ ಭಾಷೆ ನಮ್ಮ ಉಸಿರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ರಾಷ್ಟ್ರ ಧ್ವಾರೋಹಣ ನೆರವೇರಿಸಿ ಕನ್ನಡ ನಾಡು ನುಡಿ, ಸಾಹಿತ್ಯ, ವಿಜ್ಞಾನ ವಿಕಾಸದ ಕುರಿತು ವಿಶೇಷ ಭಾಷಣ ಮಂಡಿಸಿದರು.

ಬಿಇಓ ಸುರೇಂದ್ರ ಕಾಂಬಳೆಅವರು, ಕ್ಷೇತ್ರದ ಶೈಕ್ಷಣಿಕ ಬೆಳವಣಿಗೆಗೆ ಶಾಸಕ ದೊಡ್ಡನಗೌಡ ಎಚ್.ಪಾಟೀಲರು 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿರುವ ಕುರಿತು ಮಾಹಿತಿ ನೀಡಿದರು. ಕನ್ನಡ ಮಾಧ್ಯಮ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ಧೆಯಲ್ಲಿ ಆಧ್ಯತೆ ಮೀಸಲಾತಿ ನೀಡಿದರೆ’ ಕನ್ನಡ ಶಾಲೆಯತ್ತ ಪಾಲಕರ ಒಲವು ಮೂಡುವ ಸಾಧ್ಯತೆಯಿದೆ. ಹಾಗಾಗಿ ಶಾಸಕರು ಸರ್ಕಾರದಿಂದ ಗಮನಹರಿಸಲು ಯತ್ನಿಸಬೇಕು ಎಂದು ವಿನಂತಿ ಮಾಡಿದರು.

2022ರ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ಲಿಂಗದಹಳ್ಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಶರಣಬಸವ ಬೊಮ್ಮನಾಳ, ಅಡವಿಭಾವಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸವಿತಾ ಅಯ್ಯನಗೌಡರ್, ಕಿಲ್ಲಾರಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಶಿವರಾಜ ಹೊಕ್ರಾಣಿ ಇವರಿಗೆ ತಾಲೂಕಾಡಳಿತದಿಂದ ಗೌರವಿಸಿ ಲ್ಯಾಪ್ಟಾಪ್ ವಿತರಿಸಲಾಯಿತು.

ಈ ವೇಳೆ ತಾಲೂಕು ಪಂಚಾಯಿತಿ ಇಓ ನಿಂಗಪ್ಪ ಮಸಳಿ, ಸಿಪಿಐ ಯಶವಂತ ಬಿಸನಹಳ್ಳಿ, ಗ್ರೇಡ್2 ತಹಸೀಲ್ದಾರ್ ಮುರಲೀಧರ ಮುಕ್ತೆದಾರ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಶಾಲೆಗಳ ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದ ಇದ್ದರು.

ಬಳಿಕ ವಿವಿಧ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರ ಚೆನ್ನಮ್ಮ, ಒಣಕೆ ಓಬವ್ವ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭಾರತಾಂಬೆಯ ಮತ್ತು ವಿವಿಧ ಹೋರಾಟಗಾರರ ಛದ್ಮವೇಷ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.