ಕೃಷಿಪ್ರಿಯ ಫಲಶೃತಿ: ವರದಿಗೆ ಎಚ್ಚೆತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದ ಕರವೇ ಕಾರ್ಯಕರ್ತರು..!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಅಲಕ್ಷ್ಯಕ್ಕೊಳಗಾಗಿದ್ದ ಕನ್ನಡದ ಧ್ವಜದ ಕಟ್ಟೆ ಬಗ್ಗೆ ಕೊನೆಗೂ ಕನ್ನಡಪರ ಸಂಘಟನೆಗಳು ಎಚ್ಚೆತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ‘ಗೌರವ’ ಕಾಪಾಡಿದ್ದಾರೆ.

ಇಂದು ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ದಿನ
ಜಿಲ್ಲೆಯ ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಮೇಲ್ಸೇತುವೆ, ಅಂಬೇಡ್ಕರ್ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದವರು ನಿರ್ಮಿಸಿದ ಕನ್ನಡದ ಧ್ವಜದ ಕಟ್ಟೆ ಮೇಲಿನ ಹರಿದ ಹಾಗೂ ಮಾಸಿದ ಕನ್ನಡ ಭಾವುಟ ಕಂಡು ಕನ್ನಡ ಮನಸ್ಸುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಬೆಳಿಗ್ಗೆ ಕೃಷಿಪ್ರಿಯ ಆನ್ಲೈನ್ ಪತ್ರಿಕೆಯಲ್ಲಿ ‘ಅಲಕ್ಷ್ಯಕ್ಕೊಳಗಾದ ಕನ್ನಡ ಧ್ವಜದ ಕಟ್ಟೆ; ಭಾವುಟಕ್ಕೆ ಅವಮಾನ’ ಎಂಬ ತಲೆ ಬರಹದಡಿ ಸಚಿತ್ರ ವರದಿ ಪ್ರಸಾರ ಮಾಡಲಾಗಿತ್ತು.

ವರದಿ ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಕಾರ್ಯದರ್ಶಿ ಮಹೇಶ ಜಿ.ಹೆಚ್. ಹಾಗೂ ಜಿಲ್ಲಾ ಪ್ರತಿನಿಧಿ ರವೀಂದ್ರ ಬಾಕಳೆ ಮಾಸಿದ ಧ್ವಜವನ್ನು ಆರೋಹಣ ಮಾಡಲು ಮುಂದಾದಾಗ ಎಚ್ಚೆತ್ತ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಆಗಮಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದ್ದಾರೆ.