ಪರಿಹಾರ ನೀಡದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ : ಬಸ್ ಜಪ್ತಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಪಾದಚಾರಿ ಸಾವಿನ ಪರಿಹಾರ ವಿತರಿಸಲು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಳಂಬ ಮಾಡಿದ ಕಾರಣಕ್ಕೆ ಕುಷ್ಟಗಿ ಹಿರಿಯ ಸಿವಿಲ್ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ಗುರುವಾರ ಜಪ್ತಿ ಮಾಡಲಾಯಿತು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಇಳಕಲ್ ರಸ್ತೆ ಬಳಿ ಕಟ್ಟಿಗೆ ಹೊರೆ ಹೊತ್ತ ಬರುತಿದ್ದ ವೇಳೆ ಅಪಘಾತ ಸಂಭವಿಸಿ, ಮಹಿಳೆಯೋರ್ವರು ಮೃತಪಟ್ಟಿದ್ದರು. ಇದಕ್ಕೆ ಪರಿಹಾರ ಕೋರಿ ಮೃತಳ ಪತಿ ದಾದೇಸಾಬ ಹೊಸಮನಿ 2016 ರಲ್ಲಿ ದಾವೆ ಹೂಡಿದ್ದರು. 2021 ರಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದ್ರೆ ವಾಯುವ್ಯ ಸಾರಿಗೆ ಸಂಸ್ಥೆಯ ಸ್ವಲ್ಪ ಪ್ರಮಾಣದ ಹಣ ನೀಡಿ ಕೈ ತೊಳೆದುಕೊಂಡಿತ್ತು. ಈ ವಿಷಯವನ್ನು ಮತ್ತೆ ಕೋರ್ಟ್​ನ ಗಮನಕ್ಕೆ ತಂದಾಗ ಬಸ್​ ಅನ್ನು ಸೀಜ್​ ಮಾಡುವಂತೆ ಆದೇಶಿಸಲಾಗಿತ್ತು. ಇಂದು ಗುರುವಾರ ಹನುಮಸಾಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್​ ಅನ್ನು ಜಪ್ತಿ ಮಾಡಲಾಯಿತು.

ಏನಿದು ಪ್ರಕರಣ ಎನ್ನುತ್ತೀರಾ : 2016 ರಲ್ಲಿ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಳಕಲ್ ರಸ್ತೆ ಬಳಿ ಹನುಮಸಾಗರ ಗ್ರಾಮದ ದಾವಲಬೀ ಹೊಸಮನಿ ಎಂಬುವರಿಗೆ, ಬ್ಯಾಡಗಿ ಡಿಪೋದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಪರಿಣಾಮ ದಾವಲಬೀ ಹೊಸಮನಿ ಸಾವಿಗೀಡಾಗಿದ್ರು. ಈ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018 ರಲ್ಲಿ ನ್ಯಾಯಾಲಯ, MVC ಮೋಟರ್ ವಾಹನ ಕಾಯ್ದೆ ಅನ್ವಯ 18 ಲಕ್ಷ 81 ಸಾವಿರ ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು. ಆದರೆ ಸಂಸ್ಥೆಯು ನಿಗದಿತ ಅವಧಿಯೊಳಗೆ ಪರಿಹಾರ ನೀಡಲು ಅನಗತ್ಯ ವಿಳಂಬ ಮಾಡಿತ್ತು. ಅಲ್ಲದೆ ಕೋರ್ಟ್​ನಿಂದ ಎರಡು ಬಾರಿ ನೋಟೀಸ್ ನೀಡಿದರೂ, ಪರಿಹಾರ ಮಾತ್ರ ದಾವಲಬೀ ಹೊಸಮನಿ ಕುಟುಂಬದ ಕೈ ಸೇರಿರಲಿಲ್ಲ. ಮತ್ತೆ ಕೋರ್ಟ್ ಗಮನಕ್ಕೆ ತಂದ ಬಳಿಕ ಹೆಚ್ಚುವರಿ ಸಿವಿಲ್ ನ್ಯಾಯಲಯ ಬಾಕಿ ಹಣ ಹಾಗೂ ಶೇ. 6 ರಷ್ಟು ಬಡ್ಡಿ ಸೆರಿ ಒಟ್ಟು 21 ಲಕ್ಷದ 48 ಸಾವಿರದ 825 ರೂಪಾಯಿ ಪರಿಹಾರ ವಸೂಲಿಗೆ ಆದೇಶಿಸಿ ಬ್ಯಾಡಗಿ ಸಾರಿಗೆ ಡಿಪೋಗೆ ಸೇರಿದ ಒಂದು ಬಸ್ ಅನ್ನು ಜಪ್ತಿ ಮಾಡಿದೆ ಎಂದು ಈ ಕುರಿತು ಪ್ರಕರಣ ಕೈಗೆತ್ತಿಕೊಂಡ ನ್ಯಾಯವಾದಿಗಳಾದ ವಿಜಯಮಹಾಂತೇಶ ಕುಷ್ಟಗಿ, ಲಿಂಗರಾಜು ಅಗಸಿಮುಂದಿನ, ರುದ್ರಯ್ಯ ಗುರುಮಠ ವಕೀಲರ ತಂಡ ತಿಳಿಸಿದೆ.