ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಸ್ವಚ್ಛತೆ ವಾತಾವರಣ ಹೊಂದಿರುವ ಆಸ್ಪತ್ರೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೇಂದ್ರ ಸರ್ಕಾರ ಕೊಡುಮಾಡುವ ಕಾಯಕಲ್ಪ ಪ್ರಶಸ್ತಿಗೆ ಜಿಲ್ಲೆಯ ಕುಷ್ಟಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಯ್ಕೆಯಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾನದಂಡಗಳ ಪ್ರಕಾರ ‌ಪಟ್ಟಣದ ಸರ್ಕಾರಿ ಆಸ್ಪತ್ರೆ 71 ಅಂಕ ಪಡೆದು ಪ್ರಶಸ್ತಿ ಸೇರಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಲಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ತಜ್ಞವೈದ್ಯ ಡಾ.ಕೆ.ಎಸ್.ರೆಡ್ಡಿ ಅವರು ತಿಳಿಸಿದ್ದಾರೆ.

ಆಡಳಿತ ವೈದ್ಯಾಧಿಕಾರಿ ಸೇರಿ 7 ಜನ ಕಾಯಂ, ಗುತ್ತಿಗೆ ಆಧಾರದ ವೈದ್ಯರು ಒಳಗೊಂತೆ ಸುಮಾರು100 ಜನ ಆರೋಗ್ಯ ಸಿಬ್ಬಂದಿ ಹಾಗೂ 32 ಜನ ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಒಂದು ನೂರು ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಉತ್ತಮ ವಾತಾವರಣ ಕಲ್ಪಿಸಿಕೊಡುವಲ್ಲಿ ಪ್ರಯತ್ನ ನಡೆದಿದೆ. ನಿತ್ಯ ಅಂದಾಜು ಒಂದು ಸಾವಿರ ಹೊರ ಹಾಗೂ ಒಳರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಮುಖ ಆಸ್ಪತ್ರೆ ಎನಿಸಿಕೊಂಡಿದೆ. ತಿಂಗಳಿಗೆ ಸುಮಾರು 300 ಹೆರಿಗೆ ಆಗುತ್ತಿರುವುದು ದಾಖಲೆಯಾಗಿದೆ. ಅಲ್ಲದೆ ಇಲ್ಲಿ ಶಿಶುಮರಣ ಪ್ರಮಾಣವೂ ಇಳಿಮುಖವಾಗಿದೆ.

ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯ ವ್ಯವಸ್ಥೆ ಹಾಗೂ ಸ್ವಚ್ಛತೆ, ಆಸ್ಪತ್ರೆ ಹೊರಾಂಗಣ ಹಸಿರೀಕರಣಗೊಳಿಸಿ ತರಹೇವಾರಿ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಾಹನಗಳ ನಿಲುಗಡೆ ವ್ಯವಸ್ಥೆ, ಭದ್ರತಾ ಸಿಬ್ಬಂದಿ ಕೊಠಡಿ, ಸೈಲೆಂಟ್ ಜೋನ್ ಫಲಕ, ತಂಬಾಕು ನಿಷೇಧ ಫಲಕ, ಫ್ಲೇವರ್ಸ್ ಜೋಡಣೆ ಸೇರಿದಂತೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹಾಗೂ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಟ್ಟೆ ತೊಳೆಯಲು ದೋಬಿ ಘಾಟ್, ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹ ಘಟಕ, ಮಳೆನೀರು ಕೊಯ್ಲು, ಗಿಡಗಂಟೆಗಳ ತ್ಯಾಜ್ಯ ಬಳಸಿ ಎರೆಗೊಬ್ಬರ ತಯಾರಿಕಾ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿದ್ದರಿಂದ ಈ ಬಾರಿ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವಾಗಿದೆ. ಈ ಹಿಂದೆ ಕೇವಲ ಒಂದೆರಡು ಅಂಕಗಳಿಂದ ಪ್ರಶಸ್ತಿ ಕೈತಪ್ಪುತಿತ್ತು. ಈ ಬಾರಿ ಸಾರ್ವಜನಿಕರು, ಜನಪ್ರತಿನಿಧಿಗಳ ಹಾಗೂ ಆಸ್ಪತ್ರೆ ಸಿಬ್ಬಂದಿಯ ಸಹಕಾರದಿಂದ ಆಸ್ಪತ್ರೆಗೆ 71 ಅಂಕ ಸಿಕ್ಕು ಕಾಯಕಲ್ಪ ಪ್ರಶಸ್ತಿಗೆ ಆಸ್ಪತ್ರೆಯ ಆಯ್ಕೆಯಾಗಿತು. ಪ್ರಶಸ್ತಿ ಜೊತೆಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದ್ದು, ಅದನ್ನು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗೆ ಹಂಚಲಾಗುವುದು ಎಂದರು.

ಆಗಬೇಕಿದ್ದು: ಮಳೆಗಾಲದಲ್ಲಿ ಆಸ್ಪತ್ರೆ ಆವರಣ ನೀರು ಸಂಗ್ರಹಗೊಂಡು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಆವರಣದ ನೆಲಹಾಸು ವ್ಯವಸ್ಥೆ ತುಂಬಾ ಜರೂರಿದೆ. ಜತೆಗೆ ಆಸ್ಪತ್ರೆ ಇನ್ನಷ್ಟು ಸ್ವಚ್ಛತೆಗೊಳಿಸಲು ಖಾಲಿಯಿರುವ 15 ಜನ ಡಿ ಗ್ರೂಪ್ ಸಿಬ್ಬಂದಿ ಹುದ್ದೆ ತುಂಬಬೇಕಿದೆ. ಹಾಗೆಯೇ ಆಸ್ಪತ್ರೆ ಎಲ್ಲಾ ಸಿಬ್ಬಂದಿ ಮೇಲ್ವಿಚಾರಣೆಗೆ ಮೇಲ್ವಿಚಾರಕ ಹುದ್ದೆ ನೇಮಕ ಅವಶ್ಯಕತೆಯಿದೆ. ಅಲ್ಲದೆ ಆಸ್ಪತ್ರೆ ಉತ್ತಮ ವಾತಾವರಣ ಹೊಂದಿ ಹಾಗೂ ಸುಸಜ್ಜಿತವಾಗಿಟ್ಟುಕೊಳ್ಳಲು ಸಣ್ಣಪುಟ್ಟ ಕಾಮಗಾರಿ ಅಗತ್ಯವಿದೆ. ಜೊತೆಗೆ ಸಾರ್ವಜನಿಕರ ಸಹಕಾರ ನಿರಂತರವಾಗಿ ಇರಬೇಕಿದೆ ಎನ್ನುತ್ತಾರೆ ತಜ್ಞವೈದ್ಯ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ.