ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಸಮಾಜಮುಖಿ ಸೃಜನಶೀಲ ಓದುಗನಿಂದ ಮಾತ್ರ ಸಾಹಿತಿಯಾಗಿ ರೂಪಗೊಳ್ಳಬಲ್ಲ. ಯಾರಲ್ಲಿ ನಿರಂತರ ಓದು, ಉತ್ತಮ ಪುಸ್ತಕಗಳ ಅಧ್ಯಯನ ಇರುತ್ತದೋ ಅಂತವರಿಂದ ಉತ್ತಮ ಸಾಹಿತ್ಯ ರಚನೆ ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಕೆ.ಶರಣಪ್ಪ ನಿಡಶೇಸಿ (ಶನಿ) ಅವರು ಹೇಳಿದರು.
ಅವರು, ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರು ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಹಿರೇಮನ್ನಾಪೂರು ಹೋಬಳಿ ಘಟಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹಿರೇಮನ್ನಾಪುರ ಹೋಬಳಿ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ 50ನೇ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನೂಲು ಸರಿಯಾಗಿದ್ದರೆ ಉತ್ತಮ ಸೀರೆ ರೂಪಗೊಳ್ಳಲು ಹೇಗೆ ಸಾಧ್ಯವೋ ಹಾಗೆಯೇ ಒಂದು ಕವಿತೆ ಹುಟ್ಟಬೇಕಾದರೆ ನಿರಂತರ ಓದು ಬಹುಮುಖ್ಯವಾಗಿರುತ್ತದೆ ಎಂದ ಶನಿ ಅವರು, ಕವಿಗೋಷ್ಠಿಯಲ್ಲಿ ವಾಚಿಸಿದ ಕೆಲವು ಕವಿಗಳಲ್ಲಿ ಓದಿನ ಕೊರತೆಯಿದೆ. ನಿರಂತರ ಓದುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಕ್ಷಕ ನಟರಾಜ ಸೋನಾರ್ ಅವರು ಆಶಯ ನಡಿಗಳನ್ನಾಡಿದರು.
ಗಂಗಾವತಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾ, ಕನಕಗಿರಿ, ಕಾರಟಗಿ, ಕುಕನೂರು, ಹಿರೇಮನ್ನಾಪೂರು ಹೋಬಳಿ ಘಟಕದ 25 ಮಂದಿ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಈ ವೇಳೆ ಜಿಲ್ಲೆಯ ಕಸಾಪ ತಾಲೂಕಾ ಘಟಕಗಳ ಅಧ್ಯಕ್ಷರುಗಳಾದ ಕುಷ್ಟಗಿ ವೀರೇಶ ಬಂಗಾರಶೆಟ್ಟರ, ಗಂಗಾವತಿ ಶ್ರೀನಿವಾಸ ಅಂಗಡಿ, ಕೊಪ್ಪಳ ರಾಮಚಂದ್ರಗೌಡ ಗೊಂಡಬಾಳ, ಯಲಬುರ್ಗಾ ಬಾಲದಂಡಪ್ಪ ತಳವಾರ, ಕನಕಗಿರಿ ಮೆಹಬೂಬ ಹುಸೇನ್, ಕುಕನೂರು ಕಳಕಪ್ಪ ಕುಂಬಾರ, ಕಾರಟಗಿ ಶರಣಪ್ಪ ಕೋಟ್ಯಾಳ ಉಪಸ್ಥಿತರಿದ್ದರು.
ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸ್ಥಬ್ಧ ಗೊಂಬೆಗಳ ನೃತ್ಯ ಹಾಗೂ ಬ್ಯಾಂಜೋ ವಾದನ ಮೆರಗು ತಂದರೆ’ ಶಾಲಾ ಮಕ್ಕಳಿಂದ 200 ಮೀಟರ್ ಉದ್ಧದ ಕನ್ನಡ ಭಾವುಟ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಬಸ್ ನಿಲ್ದಾಣದಲ್ಲಿ ಕಸಾಪ ಹಾಗೂ ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮಹಾದೇವಿ ಬ. ಪೊಲೀಸ್ ಪಾಟೀಲ್ ಅವರು ಉದ್ಘಾಟಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್ ಹೇರೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೇಂದ್ರ ಸಂಘ-ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಗ್ರಾ.ಪಂ. ಉಪಾಧ್ಯಕ್ಷ ಪ್ಯಾಟೆಪ್ಪ ಸೂಡಿ, ಕರವೇ ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ, ಉಪಾಧ್ಯಕ್ಷ ಚೆನ್ನಪ್ಪ ನಾಲಗಾರ, ಗ್ರಾಮ ಘಟಕ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವೇಳೆ ಕಾರ್ಗಿಲ್ ಕ್ಯಾಪ್ಟನ್ ಶಿವನಾಡಗೌಡ ತೆಗ್ಗಿ ಸ್ವರಚಿತ ‘ಕವಿ ಕಂಡ ಕನಸು’ ಮತ್ತು ‘ಕನ್ನಡತಿ’, ‘ಹಾಡು ಬಾ ಕೋಗಿಲೆ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕೃತಿಗಳ ಕುರಿತು ಗಂಗಾವತಿಯ ಸಾಹಿತಿಗಳಾದ ಪವನಕುಮಾರ ಗುಂಡೂರು, ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಮಾತನಾಡಿದರು.
ಬಳಿಕ ಬೆಲೆಬಾಳುವ ಕೃಷಿ ಜಮೀನನ್ನು ಸರ್ಕಾರಿ ಶಾಲೆಗೆ ದಾನಮಾಡಿದ ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಹುಚ್ಚಮ್ಮ ಬಸಪ್ಪ ಚೌದ್ರಿ ಅವರನ್ನು ಹಾಗೂ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಅಜಮೀರ ನಂದಾಪೂರು, ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ಮಮ್ತಾಜ್ ಬೇಗಂ,
ಕಿಶನರಾವ್ ಕುಲಕರ್ಣಿ ಅವರನ್ನು ಗೌರವಿಸಲಾಯಿತು. ಇದೇವೇಳೆ ಗವಿಸಿದ್ದೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ.ಕಡೇಮನಿ ಹಾಗೂ ಕಸಾಪ ಗ್ರಾಮ ಘಟಕ ಅಧ್ಯಕ್ಷ ವಿ.ಎಸ್. ಕಾರಡಗಿಮಠ ಅವರನ್ನು ಸನ್ಮಾನಿಸಲಾಯಿತು.







