ಎಮ್. ಗುಡದೂರು ಪ್ರೌಢಶಾಲೆ ನಿರ್ಮಾಣಕ್ಕೆ ಭೂದಾನ ಮಾಡಿ ಮಾದರಿಯಾದ ಅಕ್ಕ-ತಂಗಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಶೈಕ್ಷಣಿಕ ವರ್ಷದಲ್ಲಿ ಮಂಜೂರಾದ ಜಿಲ್ಲೆಯ ಕುಷ್ಟಗಿ ತಾಲೂಕಿನ ಎಮ್. ಗುಡದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಅಕ್ಕ-ತಂಗಿಯರಿಬ್ಬರು ಬೆಲೆ ಬಾಳುವ ಒಂದು ಎಕರೇ ಕೃಷಿಭೂಮಿ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಗ್ರಾಮದ ಎಲ್ಲಮ್ಮ ಫಕೀರಪ್ಪ ಜೀರ್ ಮತ್ತೊಬ್ಬ ಸಹೋದರಿ ಸಂಗಮ್ಮ ಸಂಗಪ್ಪ ಜೀರ್ ಈರ್ವರು ಸ್ವಯಂಪ್ರೇರಣೆಯಿಂದ ಕೃಷಿಭೂಮಿ ಕೊಟ್ಟ ದಾನಿಗಳು. ಮಾದಾಪೂರು-ಗುಡದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಪ್ರೌಢ ಶಿಕ್ಷಣ ಪಡೆಯಲು ದೂರದ ಮನ್ನಾಪೂರು, ಮುದೇನೂರು ಗ್ರಾಮಗಳಿ ತೆರಳಿ ಪ್ರಯಾಸ ಪಡುವಂತಾಗಿತ್ತು. ಇದನ್ನು ಮನಗಂಡ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷ ಪ್ರೌಢಶಾಲೆ ಮಂಜೂರು ಮಾಡಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಭೂಮಿ ಅಗತ್ಯವಿರುವುದನ್ನು ಅರಿತ ಗ್ರಾಮಸ್ಥರು ಜೀರ್ ಕುಟುಂಬದ ಈ ಸಹೋದರಿಯರಲ್ಲಿ ಬಿನ್ನಹಿಸಿದ್ದಾರೆ. ಗ್ರಾಮಸ್ಥರ ಕೋರಿಕೆಗೆ ಸ್ಪಂಧಿಸಿದ ಸಹೋದರಿಯರು ಹಿರೇಮನ್ನಾಪೂರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಜಂಟಿ ಹೆಸರಲ್ಲಿರುವ ಒಂದು ಎಕರೇ ಬೆಲೆ ಬಾಳುವ ಕೃಷಿ ಜಮೀನನ್ನು ಗ್ರಾಮದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ದಾನಮಾಡಲು ಸಮ್ಮತಿಸಿದ್ದರು. ಅದರಂತೆ ಇಂದು ಸೋಮವಾರ ದಿನ ಗ್ರಾಮಸ್ಥರೊಂದಿಗೆ ಕುಷ್ಟಗಿ ನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ರಾಜ್ಯಪಾಲರ ಹೆಸರಲ್ಲಿ ತಮ್ಮ ಒಂದು ಎಕರೇ ಜಮೀನನ್ನು ನೋಂದಣಿ ಮಾಡಿಸಿದರು.

ಜ್ನಾನದೇಗುಲ ನಿರ್ಮಾಣದ ಮಹಾತ್ಕಾರ್ಯಕ್ಕೆ ಮುಂದಾದ ಸಹೋದರಿಯರಾದ ಎಲ್ಲಮ್ಮ ಜೀರ್ ಮತ್ತೊಬ್ಬ ಸಹೋದರಿ ಸಂಗಮ್ಮ ಜೀರ್ ಅವರನ್ನು ಶಿಕ್ಷಣ ಇಲಾಖೆಯಿಂದ ಫಲಪುಷ್ಪ, ಸೀರೆ ನೀಡಿ ಗೌರವಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು, ಜಿಲ್ಲೆಯಲ್ಲಿ ಹುಚ್ಚಮ್ಮ ಬಸಪ್ಪ ಚೌದ್ರಿ ಎಂಬ ಮಹಿಳೆ ತಮ್ಮ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ದಾನ ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅವರಂತೆ ತಾಲೂಕಿನ ಸಹೋದರಿಯರಿಬ್ಬರು ತಮ್ಮ ಬೆಲೆಬಾಳುವ ಕೃಷಿ ಭೂಮಿಯನ್ನು ದಾನಮಾಡಿ ಉದಾರತೆ ತೋರುವ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ ಎಂದು ಪ್ರಶೌಂಸೆ ವ್ಯಕ್ತಪಡಿಸಿದರು.

ಈ ವೇಳೆ ಭೂದಾನ ಮಾಡಿದ ಸಹೋದರಿಯರ ಪುತ್ರರಾದ ಶರಣಪ್ಪ ಪೂಜಾರ್, ನಿರುಪಾದ್ಯಪ್ಪ ಪೂಜಾರ, ದೊಡ್ಡಪ್ಪ ಪೂಜಾರ ಸೇರಿದಂತೆ ತಾ.ಪಂ. ಸದಸ್ಯ ನಾಗಪ್ಪ ದೋಟಿಹಾಳ, ಸೂಗಪ್ಪ ಅಂಗಡಿ, ಸಂಗಪ್ಪ ಪುರದ, ಬಿಆರ್.ಸಿ. ಡಾ.ಜೀವನಸಾಬ ಬಿನ್ನಾಳ, ಪ್ರಭಾರಿ ಮುಖ್ಯೋಪಾಧ್ಯಾಯ ಸೋಮನಗೌಡ ಪಾಟೀಲ್, ನಿವೃತ್ತ ಮುಖ್ಯೋಪಾಧ್ಯಾಯ ಶಿವಸಂಗಪ್ಪ ಬಿಜಕಲ್, ರಮೇಶ ಎಸ್.ಬಿಜಕಲ್, ಅಯ್ಯಪ್ಪ, ದೊಡ್ಡನಗೌಡ ಬಿ.ಪಾಟೀಲ್, ಬಸಪ್ಪ ಸಂಗಟಿ, ಬಸಪ್ಪ ಬಿಜಕಲ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.