ಎಲ್ಲಾ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ : ಸಚಿವ ಆರ್.ಬಿ.ತಿಮ್ಮಾಪೂರ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಎಲ್ಲಾ ಜಾತಿಯವರೂ ತಮ್ಮವರು ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನದಿಂದ ಹೇಳುತ್ತಾರೆ. ಆದರೆ, ಎಲ್ಲಾ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿಗಳಿಂದ ಶಾಲು, ಪುಷ್ಪದೊಂದಿಗೆ ಗೌರವ ಸ್ವೀಕರಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಕರ್ಗೆ ಸೇರಿದಂತೆ ಜಿ.ಪರಮೇಶ್ವರ ಅವರೆಗೂ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಸಧ್ಯ ಮತ್ತೆ ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂಬುದು ಮುನ್ನೆಲೆಗೆ ಬಂದಿದೆ. ಆದರೆ, ಒಬ್ಬ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಪಕ್ಷದಲ್ಲಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಬಿಡುವುದು ಶಾಸಕಾಂಗ ಪಕ್ಷದಲ್ಲಿ ತೀರ್ಮಾನವಾಗುತ್ತೆ. ಮುಖ್ಯಮಂತ್ರಿ ಸ್ಥಾನ ಅವರಿಗೆ ಇವರಿಗೆ ಕೊಡಬೇಕು ಎನ್ನುವದಕ್ಕಾಗುವದಿಲ್ಲ. ಯಾರಿಗೆ ಕೊಡಬೇಕು ಎಂಬುದು ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಷಯ. ಎಲ್ಲಾ ಜಾತಿಯವರೂ ತಮ್ಮವರು ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನದಿಂದ ಹೇಳುತ್ತಾರೆ. ಆದರೆ, ಎಲ್ಲಾ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಮಧ್ಯದ ಅಂಗಡಿ ತೆರೆಯಲು ಪ್ರಸ್ತಾಪಿಸಿದ ವಿಷಯದ ಕುರಿತು ಕೇಳಿದಾಗ ಸ್ಪಷ್ಟವಾಗಿ ಉತ್ತರಿಸದ ಸಚಿವ ಆರ್.ಬಿ.ತಿಮ್ಮಾಪೂರು ಅವರು ಗ್ರಾಮ ಪಂಚಾಯಿತಿಗೆ ಒಂದು ಮದ್ಯದ ಅಂಗಡಿ ಮಾಡಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೆಸರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಹಣ ವಸೂಲಿ ಮಾಡುತಿದ್ದಾರೆ ತಮ್ಮಲ್ಲಿ ದಾಖಲೆಗಳಿವೆ ಎಂದು ಕೆಂಪಣ್ಣ ಎಂಬುವರು ಗಂಭೀರ ಆರೋಪ ಮಾಡಿರುವ ಕುರಿತು ವರದಿಯಾಗಿದೆ ಎಂದು ವಿರೋಧ ಪಕ್ಷದ ನಾಯಕರು ಧ್ವನಿಎತ್ತಿದ್ದಾರೆ ಎಂಬ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರು ಉತ್ತರಿಸದೇ ತೆರಳಿದರು.

ಈ ವೇಳೆ ಜಾಂಬವ ಯುವ ಸೇನೆ ತಾಲೂಕಾಧ್ಯಕ್ಷ ಯಮನೂರ ಮೇಲಿನಮನಿ, ಬಾಳಪ್ಪ ಬೇವಿನಕಟ್ಟಿ, ಶರಣು ತೆಗ್ಗಿಹಾಳ, ಮರಿಯಪ್ಪ ಹಿರೇಮನ್ನಾಪೂರು, ಪ್ರಕಾಶ ತಾಳಕೇರಿ, ಶಿವಕುಮಾರ ಕಟ್ಟಿಮನಿ, ಸಿದ್ಧು ಟೆಕ್ಕಳಕಿ ಸೇರಿದಂತೆ ಇನ್ನಿತರರಿದ್ದರು.