ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 20 ಸಾವಿರ
ಶಿಕ್ಷಕರ ಹುದ್ದೆಗಳನ್ನು, ವಿಶೇಷ ನೇಮಕಾತಿ ಮೂಲಕ ಹಂತ ಹಂತವಾಗಿ ಭರ್ತಿ ಮಾಡುವಂತೆ ಸಂಬಂದಪಟ್ಟ ಇಲಾಖೆಗೆ ನಿರ್ದೇಶನ ನೀಡಿ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಬಯ್ಯಾಪೂರ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಿನಾಂಕ 07-11-2023 ರಂದು ಬರೆದ ಮನವಿ ಪತ್ರದಲ್ಲಿ ಕೋರಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 13500 ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ತಮ್ಮ ನೇತೃತ್ವದ ಸರಕಾರದಲ್ಲಿ ಪೂರ್ಣಗೊಂಡಿರುವದು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ನೆಮ್ಮದಿ ತಂದಿದೆ. ಅದರಲ್ಲಿ ಸುಮಾರು 4500 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭರ್ತಿಯಾಗಿದ್ದರೂ ಸಹ 20 ಸಾವಿರ ಶಿಕ್ಷಕರ ಹುದ್ದೆಗಳು ಖಾಲ ಇರುವದು ಆತಂಕಕಾರಿ ವಿಷಯ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಸ್ಥಿತಿ ಹಿನ್ನಲೆ ಈ ಭಾಗದಲ್ಲಿ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಖಾಲಿಯಿರುವ ಹುದ್ದೆಗಳ ಭರ್ತಿ ಮಾಡುವುದು ಜರೂರಿದೆ. ತಮ್ಮ ನೇತೃತ್ವದ ಹಿಂದಿನ ಸರಕಾರದಲ್ಲಿ. 371ಜೆ ಅಡಿಯಲ್ಲಿ ರಚಿಸಲಾದ ನಿಯಮಗಳಂತೆ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಲು ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿರುತ್ತದೆ, ಅಲ್ಲದೇ 371ಜೆ ನೇಮಕಾತಿ ನಿಯಮಗಳಲ್ಲಿ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮತಿ ಇದೆಯೆಂದು ಭಾವಿಸತಕ್ಕದ್ದು ಎನ್ನುವ ನಿಯಮ ಇರುವದರಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ವಿಶೇಷ ನೇಮಕಾತಿ ಮೂಲಕ ಹಂತ ಹಂತವಾಗಿ ಭರ್ತಿ ಮಾಡುವಂತೆ ಸಂಬಂದಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ.