ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶದ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರು ಹೇಳಿದರು.
ಅವರು ಜಿಲ್ಲೆಯ ಕುಷ್ಟಗಿ ಪಟ್ಟಣದ ಮದ್ಧಾನಿ ಹಿರೇಮಠದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಗ್ರಾಮೀಣ ವಲಯ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹುಟ್ಟುಹಾಕಿದ ಸಂಸ್ಥೆಯ ಕಾರ್ಯದಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ರೈತರ ಜೀವನಮಟ್ಟ ಸುಧಾರಿಸಿದೆ, ಹಳೆಯ ಕಾಲದ ಸಾಂಪ್ರದಾಯಿಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತಾಲೂಕಿನಲ್ಲಿ ಬರಗಾಲ ತಾಂಡವಾಡುತ್ತಿದ್ದು ಗ್ರಾಮೀಣ ಮಟ್ಟದಲ್ಲಿ ಲಕ್ಷ್ಮಿ ಪೂಜೆ ವರಮಹಾಲಕ್ಷ್ಮಿ ಪೂಜೆ ಮಾಡುವುದು ಉತ್ತಮ ಕಾಲಕಾಲಕ್ಕೆ ಮಳೆ ಬೆಳೆ ಶಾಂತಿ ಸೌಹಾರ್ದತೆ ಕಾಪಾಡಲು ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದು ಉತ್ತಮ ಎಂದು ಹೇಳಿದರು. ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಗಣೇಶ್. B, ಮುಖಂಡ ದೇವೇಂದ್ರಪ್ಪ ಬಳೂಟಗಿ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ಮದ್ಧಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮಸ್ಥಳ ಸಂಸ್ಥೆಯ ಸೌಲಭ್ಯ ವಾದ ಆರೋಗ್ಯ ರಕ್ಷಾ ಕ್ಲೇಮ್, ಮಾಶಾಸನ ವಿತರಿಸಲಾಯಿತು. ನೂತನ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ ಅರಿವಾಣ ನಿರ್ಣಯ ಪುಸ್ತಕ ನೀಡಿ ಪ್ರಮಾಣ ವಚನ ಸ್ವೀಕಾರ ಕೈಗೊಳ್ಳಲಾಯಿತು.
ಈ ವೇಳೆ ಶಂಕರಲಿಂಗ್ ಸ್ವಾಮಿಜಿ, ಅನಿಲ್ ಕುಮಾರ್. ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಜಯತಿರ್ಥ, ವಲಯ ಮೇಲ್ವಿಚಾರಕ ಶೇಖರ್ ನಾಯಕ, ಸೇವಾ ಪ್ರತಿನಿಧಿ ಸುಭಾಸ್ ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.