ಇಸ್ಪೀಟ್ ಅಡ್ಡಾ ಮೇಲೆ ಪೊಲೀಸ್ ದಾಳಿ: ₹39,000 ನಗದು ವಶ, 26 ಜನ ಬಂಧನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಇಸ್ಪೀಟ್ ಜೂಜಾಟ ಅಂದರ ಬಾಹರ ನಸೀಬು ಆಟದಲ್ಲಿ ತೊಡಗಿದ್ದ ಪ್ರತ್ಯೇಕ ಮೂರು ಗುಂಪಿನ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 26 ಜನ ಆರೋಪಿತರನ್ನು ಬಂಧಿಸಿ ₹39,000 ರೂಪಾಯಿ ನಗದು ವಶ ಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ಮಾಲಗಿತ್ತಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಆವರಣ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 11,700 ರೂಪಾಯಿ ವಶಕ್ಕೆ ಪಡೆದು 9 ಜನ ಆರೋಪಿತರನ್ನು ಬಂಧಿಸಿದ್ದಾರೆ. ಅದೇರೀತಿ ಹೂಲಗೇರಿ ಗ್ರಾಮದ ಅಶೋಕ ಗೌಡ್ರು ಎಂಬುವರಿಗೆ ಸೇರಿದ ಖಾಲಿ ಜಾಗೆಯ ಶೆಡ್ಡಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿ 12,400 ರೂಪಾಯಿ ನಗದು ವಶಕ್ಕೆ ಪಡೆದು 10 ಜನ ಆರೋಪಿತರನ್ನು ಬಂಧಿಸಿದ್ದಾರೆ. ಅದೇಗ್ರಾಮದ ಗ್ರಾಮ ಪಂಚಾಯಿತಿ ಕಾಂಪೌಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 7 ಜನರ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು 7,800 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಈ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.