ಸಂದೀಪ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಿಲ್ಲ ಸೌಕರ್ಯ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಸಂದೀಪ ನಗರದಲ್ಲಿನ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯ ಹಾಗೂ ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದೆ.

1 ರಿಂದ 4 ನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಮೂರು ಕೊಠಡಿಗಳಿವೆ. ಆದರೆ, ತಡೆಗೋಡೆ ಕಾಂಪೌಂಡ್ ಇಲ್ಲ. ರಕ್ಷಣೆಯೂ ಇಲ್ಲದೇ ಸಾರ್ವಜನಿಕರಿಗೆ ಮುಕ್ತವಾಗಿದೆ. ಜೊತೆಗೆ ಶೌಚಾಲಯ, ನೀರಿನ ವ್ಯವಸ್ಥೆ ಕೂಡಾ ಇಲ್ಲ. ವಿಷಜಂತು ಹುಳು ಉಪ್ಪಡಿಗಳ ಕಾಟವಿದ್ದು, ಇಲ್ಲಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ನಿತ್ಯ ಭಯದಲ್ಲಿಯೇ ವಿದ್ಯಾಭ್ಯಾಸ ಮಾಡುತಿದ್ದಾರೆ. ಇಂತಹ ಸ್ಥಿತಿಯಲ್ಲಿ ಇಬ್ಬರು ಶಿಕ್ಷಕಿಯರು ಒಬ್ಬ ಮುಖ್ಯಶಿಕ್ಷರು ಮಕ್ಕಳಿಗೆ ಶಿಕ್ಷಣ ನೀಡುವಂತಾಗಿದೆ.

ಶಾಲಾ ಕಟ್ಟಡಕ್ಕೆ ಹೊಂದಿಕೊಂಡು ಹಾಳುಬಿದ್ದ  ಹಳೇಯ ಸಮುದಾಯ ಭವನ ಕಟ್ಟಡವಿದ್ದು, ಕಿಟಕಿ ಬಾಗಿಲು ಕಿತ್ತುಹೋಗಿ ಅನೈತಿಕ ಚೆಟುವಟಿಕೆಯ ತಾಣವಾಗಿದೆ. ಭವನದಲ್ಲಿ ಗುಟುಖಾ ಪೌಚು, ಇತರೆ ದುಶ್ಚಟಗಳ ವಸ್ತುಗಳು ಹರಡಿಕೊಂಡರೆ ಗೋಡೆಗಳ ಸುತ್ತಲೂ ಪುಡಾರಿಗಳು ಪ್ರೇಮ ಸೂಚಕ ಚಿನ್ಹೆ ಬಿಡಿಸಿ ಏನೇನೋ ಗೀಚಿ ಶಾಲಾ ಪರಿಸರದ ಪಾವಿತ್ರ್ಯ ಹಾಳುಗೆಡವಿದ್ದಾರೆ.

ಇದರದೆ ಆದ ಕಿಟಕಿ ಕಿತ್ತೋದ ಇನ್ನೊಂದು ಕೋಣೆಯಿದ್ದು, ಅಲ್ಲಿ ಮೂತ್ರ ವಿಸರ್ಜಿಸಲಾಗುತ್ತಿದೆ. ಈ ಸ್ಥಿತಿ ಕಂಡು ಮಕ್ಕಳು ಖಾಸಗಿ ಶಾಲೆಯತ್ತ ಮುಖಮಾಡುವಂತಾಗಿದೆ.

ಈ ಶಾಲೆಗೆ 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆಯಡಿ ಅಂದಾಜು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ಕಟ್ಟಡ ಸೇರಿದಂತೆ ಶಾಲೆಯ ಸುತ್ತಲೂ  ಕಾಂಪೌಂಡ್ ನಿರ್ಮಿಸಲು ಮುಂದಾದ ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ಣಗೊಳಿಸದೇ ಕಳೆದೆರಡು ವರ್ಷಗಳಿಂದ ಅರ್ಧಕ್ಕೆ ನಿಲ್ಲಿಸಿದೆ. ಇದರಿಂದ ಶಿಕ್ಷಕಿಯರು ಸೇರಿದಂತೆ ಶಾಲಾ ಮಕ್ಕಳಿಗೆ ಶೌಚಾಲಯ ಹಾಗೂ ಮೂತ್ರಾಲಯ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಏಳೆಂಟು ತಿಂಗಳು ಹಿಂದೆ ಈ ಕುರಿತು ಎರಡು ಬಾರಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಮಾತನಾಡಿ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಆದರೆ, ಈ ವರೆಗೂ ಕಾಂಪೌಂಡ್ ಹಾಗೂ ಶೌಚಾಲಯ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಈ ಕುರಿತು ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು ಮನವಿ ಸಲ್ಲಿಸಿದರೂ ಕೂಡ ಶಿಕ್ಷಣ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ಈ ಶಾಲೆಗೆ ಶೌಚಾಲಯ ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಒದಗಿಸಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಹಾಗೂ ಶಿಕ್ಷಕಿಯರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕಿದೆ.

2020-21ನೇ ಸಾಲಿನಲ್ಲಿ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ ಶಾಲೆಯ ಕಾಂಪೌಂಡ್ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.  ಪಶ್ಚಿಮ ಭಾಗದಲ್ಲಿ ಒಂದೆಡೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿದೆ. ಶೌಚಾಲಯ ಕಟ್ಟಡ ನಿಂಟಲ್ ವರೆಗೆ ಎತ್ತರಿಸಲಾಗಿದೆ. ಕಾರಣ ಸುಮಾರು ದಿನಗಳಿಂದ ಬಿಲ್ ಆಗದ ಹಿನ್ನೆಲೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಬಿಲ್ ಆದಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವದು.

ಆದೇಶ ಗುಡಿಹೊಲ
ಜೆಇ, ನಿರ್ಮಿತಿ ಕೇಂದ್ರ ಕುಷ್ಟಗಿ.

ಕಾಂಪೌಂಡ್ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣ ಹೊಣೆ ಹೊತ್ತ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಐದಾರು ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದೆ. ಮತ್ತೊಮ್ಮೆ ಅವರಿಗೆ ಕೆಲದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ವಿನಂತಿಸುತ್ತೇನೆ.

ಸುರೇಂದ್ರ ಕಾಂಬಳೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಷ್ಟಗಿ.