ತುಂಬಿದ ಮನ್ನೇರಾಳ ಕೆರೆ ಮುಖ್ಯ ವಡ್ಡು ಬಿರುಕು; ಗ್ರಾಮಸ್ಥರು ಆತಂಕ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಕೆರೆ ತುಂಬಿಸುವ ಯೋಜನೆಯಡಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೃಹದಾಕಾರದ ಮನ್ನೇರಾಳ, ಜಿನುಗು ಕೆರೆಗೆ ಕೃಷ್ಣ ನದಿ ನೀರು ತುಂಬಿಸಲಾಗಿದೆ. ಆದರೆ, ಕೆರೆಯ ಮುಖ್ಯ ವಡ್ಡು ದೊಡ್ಡ ಪ್ರಮಾಣದಲ್ಲಿ ಬಿರುಕುಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕೆರೆ ಒಡೆದು ನೂರಾರು ಎಕರೆ ಜಮೀನು ಅಲ್ಲದೇ ಜೀವ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ ಪಟ್ಟಣದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿ ತಿಳಿಸಿದರು. ಮನ್ನೇರಾಳ ಹಾಗೂ ಸೇಬಿನಕಟ್ಟಿ ಗ್ರಾಮಗಳ ನಡುವೆ 2007-08 ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಅಂದಾಜು 25 ಎಕರೆ ವಿಸ್ತೀರ್ಣದ ಜಿನುಗು ಕೆರೆ ಇದಾಗಿದೆ. ಆದರೆ, ಕೆರೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದ ಇಲಾಖೆ ಮುಖ್ಯ ವಡ್ಡು ವೈಜ್ಞಾನಿಕವಾಗಿ ನಿರ್ಮಿಸಿದ್ದಿಲ್ಲ. ಹಾಗೂ ವೇಸ್ಟವೇರ ನೀರು ಹಳ್ಳಕ್ಕೆ ಹರಿದು ಹೋಗುವ ವ್ಯವಸ್ಥೆ ಸಹ ಮಾಡದೇ. ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದೆ.

2009ರಲ್ಲಿ ಸುರಿದ ಭಾರಿ ಮಳೆಯಿಂದ ಕೆರೆ ತುಂಬಿದಾಗ ವಡ್ಡಿನಲ್ಲಿ ಬಸಿ ಕಾಣಿಸಿಕೊಂಡಿತ್ತು. ಆ ಕುರಿತು 2010-11 ರಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎರಡ್ಮೂರು ಬಾರಿ ಪತ್ರ ಬರೆದರೂ ಅಧಿಕಾರಿಗಳು ಗಮನ ಹರಿಸಲಿಲ್ಲ. ಸಧ್ಯ ಕೆರೆ ತುಂಬಿಸುವ ಯೋಜನೆಯಡಿ ಕೃಷ್ಣ ನದಿ ನೀರನ್ನು ಬಿಟ್ಟ ಪರಿಣಾಮ ಸಧ್ಯ ಕೆರೆ ಭರ್ತಿಯಾಗಿದೆ.

ಆದರೆ, ಕೆರೆಯ ವಡ್ಡಿನಲ್ಲಿ ಬಿರುಕು ಮತ್ತಷ್ಟು ಕಾಣಿಸಿಕೊಂಡು ನೀರು ಬಸಿದು ಅಕ್ಕಪಕ್ಕದ ಜಮೀನುಗಳಲ್ಲಿ ಹರಿಯುತ್ತಿದೆ. ಯಾವ ಸಂದರ್ಭದಲ್ಲಿ ಕೆರೆ ಒಡೆಯುತ್ತದೋ ತಿಳಿಯದು. ಕೆರೆಗೆ ಹೊಂದಿಕೊಂಡು ಮುಖ್ಯರಸ್ತೆಯಿದ್ದು, ನಿತ್ಯ ಶಾಲಾಮಕ್ಕಳು, ಕೃಷಿ ಕೂಲಿಕಾರರು ಹಾಗೂ ನರೇಗಾ ಕೂಲಿಕಾರ್ಮಿಕರು ಅಲ್ಲದೇ ಸೇಬಿನಟಟ್ಟಿ ಗ್ರಾಮಸ್ಥರು ನ್ಯಾಯ ಬೆಲೆ ಅಂಗಡಿಗೆ, ಹಾಲಿನ ಘಟಕಕ್ಕೆ ಈ ರಸ್ತೆ ಮೂಲಕ ಮನ್ನೇರಾಳ ಸೇಬಿನಟಟ್ಟಿ ಗ್ರಾಮಗಳಿಗೆ ತೆರಳುತ್ತಾರೆ. ಜನದಟ್ಟಣೆಯಿಂದ ಈ ರಸ್ತೆ ಕೂಡಿರುತ್ತದೆ. ಕೆರೆ ವಡ್ಡು ಒಡೆದರೆ ನೂರಾರು ಎಕರೇ ಜಮೀನು ಸೇರಿದಂತೆ ಜೀವಹಾನಿ ಸಂಭವಿಸಲಿದೆ. ಈಗಾಗಲೇ ಈ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ಅಧಿಕಾರಿಗಳನ್ನು ಕೆರೆ ಪರಿಶೀಲನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಆದರೆ, ಬೃಹದಾಕಾರದ ಕೆರೆ ಇಂದೋ ನಾಳೆಯೋ ಒಡೆದು ಹಾನಿ ಸಂಭವಿಸುವ ಮುನ್ನ ಜಿಲ್ಲಾಧಿಕಾರಿಗಳು ಎಚ್ಚೆತ್ತು ಕೂಡಲೇ ಮುಖ್ಯ ವಡ್ಡಿಗೆ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ನೇಮಣ್ಣ ಮೇಲಸಕ್ರಿ ಅವರು ಮಾಧ್ಯಮ ಮೂಲಕ ಕೋರಿದರು. ಕ್ರಮಕ್ಕೆ ಮುಂದಾಗದಿದ್ದರೆ ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.

ಈ ವೇಳೆ ನ್ಯಾಯವಾದಿ ಪರಶುರಾಮ ಗುಜಮಾಗಡಿ, ರೈತರಾದ ಮಂಗಳಪ್ಪ ಕೋರಿ ಸೇಬಿನಕಟ್ಟಿ, ಬಸಪ್ಪ ಬಾದಿಮನಾಳ ಸೇಬಿನಕಟ್ಟಿ, ಅಶೋಕ ಬೆಣ್ಣೆ ಬಾದಿಮನಾಳ, ಸೋಮಲಿಂಗಪ್ಪ ಮನ್ನೇರಾಳ, ಮಹಾಂತೇಶ ಮೇಲಸಕ್ರಿ ಇದ್ದರು.