ಕೃಷಿಪ್ರಿಯ ನ್ಯೂಸ್ |
ಸಂಗಮೇಶ ಮುಶಿಗೇರಿ
ಕೊಪ್ಪಳ: ಎಲ್ಲಾ ಮಹಾತ್ಮರ ಜಯಂತಿಗಳು ಜಾಗೃತಗೊಳಿಸಬೇಕೆ ಹೊರತು ಬರಿ ಆಚರಿಸಿದರೆ ಸಾಲದು ಅವರ ತತ್ವ, ಆದರ್ಶಗಳು ಬಾಳಿಗೆ ಬೆಳಕಾಗಬೇಕು ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ಹೇಳಿದರು.
ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ನಡೆದ ಶ್ರೀ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಫಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.
ಹಿಂದಿನ ಎಲ್ಲಾ ಸಂತರು, ಶರಣರು, ಮಹಾತ್ಮರು, ದಾರ್ಶನಿಕರು ಮಹನೀಯರ ವಿಚಾರಧಾರೆಗಳು ಮನುಕುಲ ಒಳಿತಿಗಾಗಿರುವ ಸಂದೇಶಗಳನ್ನು ನೀಡಿದ್ದಾರೆ. ಅವರ ತತ್ವ, ಆದರ್ಶಗಳಡಿ ಸಾಗಿದಾಗ ಮಾತ್ರ ಮಾನವೀಯತೆ ಮೆರೆಯಲು ಸಾಧ್ಯ. ಅವರ ಉದ್ದೇಶ ಒಂದೇಯಾಗಿದೆ. “ನೀನು ಬದುಕಬೇಕು ನಿನ್ನೊಟ್ಟಿಗೆ ಇನ್ನೊಬ್ಬರು ಬದುಕಲು ಅವಕಾಶ ಮಾಡಿಕೊಡು” ಎಂಬುದು. ಈ ನಿಟ್ಟಿನಲ್ಲಿ ಸಹೋದರ ಸಮಾಜವನ್ನ ಭ್ರಾತೃತ್ವದ ಭಾವನೆಯಡೆ ಬೆಸೆದು ಸಹೋದರ ಸಂಬಂಧ ಗಟ್ಟಿಗೊಳಿಸೋಣ ಎಂದು ಕರೆ ನೀಡಿದರು.
ತೀವ್ರ ಬರಗಾಲದ ಈ ಸಮಯದಲ್ಲಿ ಹಾಲುಮತ ಸಮಾಜದವರು ಶ್ರೀಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿರ್ಧಾರ ಕೈಗೊಳ್ಳದೇ ಅತ್ಯಂತ ಸರಳವಾಗಿ ಆಚರಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಹಾಲುಮತ ಸಮಾಜದ ಆಶಯದಂತೆ ಪಟ್ಟಣದ ಕನಕದಾಸ ವೃತ್ತದಲ್ಲಿ ಶ್ರೀಕನಕ ದಾಸರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅನಾವರಣಗೊಳ್ಳಬೇಕಿದೆ. ಹಾಗೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ಕನಕದಾಸ ಭವನ ಸಂಪೂರ್ಣಗೊಳಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೆ ದಿನಾಂಕ ಪಡೆಯಬೇಕಿದೆ. ದಿನಾಂಕ ಸಿಗದಿದ್ದರೆ ಬೇರೆ ಯಾರನ್ನಾದರೂ ಕರೇಯಿಸಿ ಮುಂದಿನದಿನಗಳಲ್ಲಿ ಆದಷ್ಟು ಬೇಗ ಅನಾವರಣಗೊಳಿಸಲಾಗುವದು.
– ದೊಡ್ಡನಗೌಡ ಎಚ್.ಪಾಟೀಲ್
ಶಾಸಕರು, ಕುಷ್ಟಗಿ.
ಈ ವೇಳೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ಸಿಪಿಐ ಯಶವಂತ ಬಿಸನಳ್ಳಿ, ಪುರಸಭೆ ಸದಸ್ಯ ಕಲ್ಲೇಶ ತಾಳದ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡ್ಡಿಗೇರಿ, ಮುಖಂಡರಾದ ನ್ಯಾಯವಾದಿ ಫಕೀರಪ್ಪ ಚಳಗೇರಿ, ಅಶೋಕ ಬಳೂಟಗಿ, ಶಿವಕುಮಾರ ಗಂಧದಮಠ ಸೇರಿದಂತೆ ಹಾಲುಮತ ಸಮಾಜದವರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.