ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಮುದೇನೂರು ರಸ್ತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಬಳಿ ಹರಿಯುವ ಚರಂಡಿ ನೀರು ಮತ್ತು ಪ್ರವಾಹ ತಡೆಗೆ ನರೇಗಾ ಯೋಜನೆಯಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸದಸ್ಯರು ಒತ್ತಾಯಿಸಿದರು.
ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಗ್ರಾಮದ ಚರಂಡಿ ನೀರು ಸೇರಿದಂತೆ ಮಳೆನೀರು ದೊಡ್ಡ ಪ್ರಮಾಣದಲ್ಲಿ ಹರಿದು ಆರೋಗ್ಯ ಕೇಂದ್ರದ ಆವರಣಕ್ಕೆ ನುಗ್ಗುತ್ತದೆ. ಜೊತೆಗೆ ಬಿಡಾಡಿ ದನಗಳು ಕಾಟ ಹೆಚ್ಚಾಗಿ ನಿತ್ಯ ಬರುವ ರೋಗಿಗಳಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.
ಪಿಡಿಒ ಮುತ್ತಪ್ಪ ಛಲವಾದಿ ಅವರು ಪ್ರತಿಕ್ರಿಯಿಸಿ, ನರೇಗಾದಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 2023-24ನೇ ಸಾಲಿನ 15ನೇ ಹಣಕಾಸಿನ ಕುರಿತು ಹಾಗೂ 2024-25ನೇ ಸಾಲಿನ ನರೇಗಾ ಕಾಮಗಾರಿಗಳ ಕ್ರಿಯಾಯೋಜನೆ ಕುರಿತು ಸದಸ್ಯರ ಚರ್ಚೆ ಮೇರೆಗೆ ಅಂತಿಮಗೊಳಿಸಿದರು. ಜೆಜೆ ಎಂ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಚರಂಡಿ ನೀರಿನ ಮಧ್ಯೆಯೇ ಪೈಪ್ ಲೈನ್ ಅಳವಡಿಸಿ ಕಾಂಕ್ರೀಟ್ ಹಾಕುತ್ತಿದ್ದು, ಇದು ಅವೈಜ್ಞಾನಿಕ ಕಾಮಗಾರಿಯಾಗಲಿದೆ. ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಈ ಕುರಿತು ಪಿಡಿಒ ಮುತ್ತಪ್ಪ ಚಲುವಾದಿ ಪ್ರತಿಕ್ರಿಯಿಸಿ, ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಜೊತೆಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಖಾಲಿಯಿರುವ ಗೌರವಧನ ಹುದ್ದೆಗಳ ಕುರಿತು, ಕಸವಿಂಗಡನೆ ಮಾಡುವುದು ಮತ್ತು ನಳಜಲ ಮಿತ್ರ ಆಯ್ಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಪತ್ರಕರ್ತರಿಗೆ ನಿವೇಶನ ವಿಳಂಬ, ಚರ್ಚೆ: ದೋಟಿಹಾಳದ ಗ್ರಾಮೀಣ ಪತ್ರಕರ್ತ ಮಲ್ಲಿಕಾರ್ಜುನ ಮೆದಿಕೇರಿ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ಪತ್ರಿಕಾ ಸೇವಾ ಹಿರಿತನ ಪರಿಗಣಿಸಿ ಖಾಲಿ ನಿವೇಶನ ಒದಗಿಸಲು ಹಿಂದಿನ ಅವಧಿಯ ಆಡಳಿತ ಮಂಡಳಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಆದರೆ, ವರ್ಷ ಕಳೆದರೂ ನಿವೇಶನ ನೀಡದ ಹಿನ್ನೆಲೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬಳಗದವರು ಸಭೆಗೆ ಆಗಮಿಸಿ ಈಗಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಪಿಡಿಒ ಅವರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು.
ಮನವಿ ಆಲಿಸಿದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಕಾಳಗಿ, ಪಿಡಿಒ ಮುತ್ತಪ್ಪ ಚಲುವಾದಿ ಹಾಗೂ ಸದಸ್ಯರು, ವಿಳಂಬಕ್ಕೆ ವಿಷಾದವಿದ್ದು, ಇದೇ ಸಭೆಯಲ್ಲಿ ಇದೇ ವಿಷಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಳಿಕ ಪತ್ರಕರ್ತ ಮಲ್ಲಿಕಾರ್ಜುನ ಮೆದಿಕೇರಿ ಅವರಿಗೆ ಖಾಲಿ ನಿವೇಶನ ಗುರುತಿಸಿ ಹಕ್ಕುಪತ್ರ ನೀಡುವ ಬಗ್ಗೆ ಪತ್ರಕರ್ತರ ಸಂಘದ ಪ್ರಮುಖರಿಗೆ ಭರವಸೆ ನೀಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ಕಾಳಗಿ, ಪಿಡಿಒ ಮುತ್ತಪ್ಪ ಚಲವಾದಿ, ಉಪಾಧ್ಯಕ್ಷೆ ಲಕ್ಷ್ಮವ್ವ ರಾಮಪ್ಪ ವಡ್ಡರ್ ಸದಸ್ಯರಾದ ಸವಿತಾ ರಾಘವೇಂದ್ರ ಕುಂಬಾರ್, ಗೌಸು ಸಾಬ್ ಕೊಣ್ಣೂರ್, ಲಕ್ಷ್ಮವ್ವ ಹನುಮಪ್ಪ ಕುಷ್ಟಗಿ, ಶಿವನಗೌಡ ಪೊಲೀಸ್ ಪಾಟೀಲ್, ಷರೀಫಾಬಿ ರಾಜೆಸಾಬ್ ಎರಡೋಣಿ, ದೇವರಾಜ ಕಟ್ಟಿಮನಿ, ಶ್ರೀಕಾಂತ ಕಂದಕೂರು, ಲಾಡಸಾಬ ಯಲಬುರ್ಗಿ, ರುಕುಮುದ್ದೀನ್ ಸಾಬ್ ನೀಲಗಾರ್, ನಾಗವ್ವ ಯಂಕಪ್ಪ ಜುಮ್ಲಾಪುರ, ಲಕ್ಷ್ಮೀಬಾಯಿ ನಾರಾಯಣಪ್ಪ ಸಕ್ರಿ, ಮಲ್ಲಮ್ಮ ರಾಮಪ್ಪ ಮೇಟಿ ಸೇರಿದಂತೆ ಸಿಬ್ಬಂದಿ ಇದ್ದರು.