ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡ ಪ್ರಯುಕ್ತ 50ರ ಸಂಭ್ರಮ ಜ್ಯೋತಿ ರಥಯಾತ್ರೆಯನ್ನು ಪಟ್ಟಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುರಸಭೆಯಿಂದ ಅದ್ಧೂರಿಯಾಗಿ ನೆರವೇರಿಸಲಾಯಿತು.
ಪಟ್ಟಣದ ಗಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವಿಸಿದರು. ಬಳಿಕ ನಾಡದೇವತೆ ಭುವನೇಶ್ವರಿ ಮೂರ್ತಿ ಸೇರಿದಂತೆ ನಾಡಿನ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಗೊಂಬೆಗಳು ಹಾಗೂ ವಿಜಯನಗರ ಹಂಪೆಯ ಕಲ್ಲಿನ ರಥದ ಮಾದರಿ ಇರಿಸಿದ ಜ್ಯೋತಿ ರಥಯಾತ್ರೆಗೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪುಷ್ಪ ಸಮರ್ಪಿಸಿದರು. ನಂತರ ಕನ್ನಡ ಭಾವುಟ ಪ್ರದರ್ಶಿಸಿ ಯಾತ್ರೆಗೆ ಚಾಲನೆ ನೀಡಿದರು.
ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಿದ ಕನ್ನಡ ಜ್ಯೋತಿ ರಥಯಾತ್ರೆ ಮಾರುತಿ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಸಾಗಿತು. ಯಾತ್ರೆಯಲ್ಲಿ ಹನುಮಸಾಗರ ಕಸ್ತೂರಿ ಬಾ ವಸತಿ ಶಾಲೆಯ ವಿದ್ಯಾರ್ಥಿನಿಯರ ಜಾನಪದ ಕಲಾ ತಂಡದಿಂದ ಡೊಳ್ಳು ಕುಣಿತ, ಬ್ಯಾಂಜೋ ವಾದನ ಹಾಗೂ ಸ್ತಬ್ಧ ಗೊಂಬೆಗಳ ಕುಣಿತ, ಕುದುರೆ ಕುಣಿತ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ಭಾನುವಾರದ ಸಂತೆಯಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನ ನಾಡದೇವತೆ ಭುವನೇಶ್ವರಿ ಮೂರ್ತಿ, ಕಲ್ಲಿನ ರಥ ಹಾಗೂ ಡೊಳ್ಳು ಕುಣಿತ ಮತ್ತು ಗೊಂಬೆ ಕುಣಿತ ಕುದುರೆ ಕುಣಿತ ಸಂಭ್ರಮವನ್ನು ಕಣ್ತುಂಬಿಕೊಂಡರೆ ಕೆಲವರು ಸಂಭ್ರಮವನ್ನು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡರು.
ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಎಸ್ ಮಸಳಿ ಅವರು ನಾಡದೇವತೆ ಮೂರ್ತಿಗೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು.
ಬಳಿಕ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಹಾಗೂ ಇಒ ನಿಂಗಪ್ಪ ಮಸಳಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶರಣಪ್ಪ ವಡ್ಡಿಗೇರಿ ಅವರು, ಡೊಳ್ಳು ಬಾರಿಸುವ ಮೂಲಕ ಕಸ್ತೂರಬಾ ವಸತಿ ಶಾಲೆ ವಿದ್ಯಾರ್ಥಿನಿಯರ ಜಾನಪದ ಕಲಾ ತಂಡದ ಡೊಳ್ಳು ಕುಣಿತಕ್ಕೆ ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಬಳಿಕ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಅಂಬೇಡ್ಕರ್ ವೃತ್ತದ ವರೆಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಪಟ್ಟಣದ ಕನ್ನಡಿಗ ಶರಣಪ್ಪ ಹೂಗಾರ ಅವರು ತಮ್ಮ ಕನ್ನಡದ ಮನೆಯಿಂದ ದಂಪತಿ ಸಮೇತ ತಂದ ಮಂಗಳಾರತಿಯನ್ನು ಬೆಳಗುವ ಮೂಲಕ ಜ್ಯೋತಿ ರಥಯಾತ್ರೆ ಬೀಳ್ಕೊಡಲಾಯಿತು.
ಈ ವೇಳೆ ಗ್ರೇಡ್-2 ತಹಸೀಲ್ದಾರ್ ಮುರಲೀಧರ ಮುಕ್ತೇದಾರ, ಶಿರಸ್ಥೆದಾರ ಸತೀಶ, ತಾ.ಪಂ. (ಪಂ.ರಾ.) ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸ್ ಪಾಟೀಲ್, ಸಿಡಿಪಿಒ ಯಲ್ಲಮ್ಮ ಹಂಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಕ.ಸಾ.ಪ. ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಶ.ಸಾ.ಪ. ತಾಲೂಕಾಧ್ಯಕ್ಷ ನಟರಾಜ ಸೋನಾರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ ನೌಕರರು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ್ದ ಜಾನಪದ ಸಂಗೀತ ಕಲಾವಿದರು, ಸಾರ್ವಜನಿಕರು ಪಾಲ್ಗೊಂಡು ನಾಡ ಧ್ವಜ ಹಾಗೂ ಶಾಲು ಪ್ರದರ್ಶನ ಜೊತೆಗೆ ಕನ್ನಡ ಪರ ಜೈಯ ಘೋಷಣೆಗಳನ್ನು ಮೊಳಗಿಸುವ ಮೂಲಕ ಕನ್ನಡ ನಾಡು ನುಡಿಯ ಸಂಭ್ರಮಕ್ಕೆ ಸಾಕ್ಷಿಯಾದರು.