ಕೊಪ್ಪಳ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಗೆ ರಾಜ್ಯ ಮಟ್ಟದ ಪುರಸ್ಕಾರ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಬೆಂಗಳೂರು/ಕೊಪ್ಪಳ : ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ದಾನ ಸಂಗ್ರಹಿಸುವಲ್ಲಿ ಪ್ರಥಮ ಸ್ಥಾನ ಪಡೆದ ಕೊಪ್ಪಳ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯಪಾಲ ತಾವರಚಂದ ಗೆಹ್ಲೋಟ್ ಅವರಿಂದ ರಾಜ್ಯ ಮಟ್ಟದ ಪುರಸ್ಕಾರ ಪಡೆದಿದೆ.

ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರಚಂದ ಗೆಹ್ಲೋಟ್ ಅವರಿಂದ ಕೊಪ್ಪಳ ಜಿಲ್ಲಾಧಿಕಾರಿ ನಲಿನ ಅತುಲ್ ಸೇರಿದಂತೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರಾದ ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ, ಡಾ. ಶ್ರೀನಿವಾಸ್ ಹ್ಯಾಟಿ, ಕುಷ್ಟಗಿಯ ವೈದ್ಯ ಡಾ. ರವಿಕುಮಾರ ದಾನಿ ಅವರು ಪುರಸ್ಕಾರ ಸ್ವೀಕರಿಸಿದರು. ಒಂದೇ ವರ್ಷದಲ್ಲಿ 10,500 ಕ್ಕೂ ಅಧಿಕ ಬ್ಲಡ್ ಯೂನಿಟ್ ಸಂಗ್ರಹಿಸಿದ ನಿಮಿತ್ಯ ಕೊಪ್ಪಳ ಜಿಲ್ಲೆ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ವಿಶೇಷ.

ಈ ಹಿಂದೆ ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ಕೊಪ್ಪಳ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಲ್ಲಿಸಿದ ಸೇವೆಗೆ ರಾಜ್ಯಮಟ್ಟದಲ್ಲಿ ಪ್ರಥಮ್ ಸ್ಥಾನ ಪಡೆದು ರಾಜ್ಯಪಾಲರಿಂದ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಯ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ತಂಡದ ಈ ಸಾಧನೆಗೆ ಜಿಲ್ಲೆಯಾದ್ಯಂತ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ.