ಕುಷ್ಟಗಿಯಲ್ಲಿ ನಿವೃತ್ತ ನೌಕರ, ಶಿಕ್ಷಕನ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು, ಸಾವಿರಾರು ರೂ. ವಂಚನೆ !

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಿವೃತ್ತ ನೌಕರ ಹಾಗೂ ಖಾಸಗಿ ಶಾಲೆಯ ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು ಸಾವಿರಾರು ರೂಪಾಯಿ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿಯ ಲೋಕೋಪಯೋಗಿ ಇಲಾಖೆ ಡಿ ದರ್ಜೆ ನಿವೃತ್ತ ನೌಕರ ರಾಜೇಸಾಬ ಎಂಬುವರು ಪ್ರತಿ ತಿಂಗಳು ತಮ್ಮ ಪಿಂಚಣಿ ಹಣ ಜಮೆಯಾಗುವ ಎಸ್’ಬಿಐ ಬ್ಯಾಂಕ್ ಖಾತೆಯಲ್ಲಿ 20 ಸಾವಿರ ರೂಪಾಯಿ ಹಾಗೂ ಇನ್ನೊಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 10 ಸಾವಿರ ರೂಪಾಯಿ ಸೈಬರ್ ಖದೀಮರು ಕನ್ನ ಹಾಕಿದ್ದಾರೆ.

ಈ ಕುರಿತು ಎರಡೂ ಬ್ಯಾಂಕಿನ ವ್ಯವಸ್ಥಾಪಕರನ್ನು ಭೇಟಿಯಾಗಿ ವಿಚಾರಿಸಲಾಗಿ ತಮ್ಮ ಖಾತೆಯಿಂದ ಹಣ ಕಡಿತವಾಗಿರುವ ಕುರಿತು ಲಿಖಿತ ಮಾಹಿತಿ ನೀಡಿದ್ದಾರೆ. ಇದರಿಂದ ವಿಚಲಿತವಾಗಿರುವ ರಾಜೇಸಾಬ ಎಲ್ಲೂ ತಾನು ಹಣ ಡ್ರಾ ಮಾಡಿಕೊಂಡಿರುವುದಿಲ್ಲ. ಯಾರಿಗೂ ತನ್ನ ತಂಬ್ ನೀಡಿಲ್ಲ. ನನ್ನ ಖಾತೆಯಿಂದ ಹಣ ಕಡಿತವಾಗಲು ಹೇಗೆ ಸಾದ್ಯ ಎಂದು ಪ್ರಶ್ನಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ನೀಡಿದ್ದಾನೆ. ಆದರೆ, ಬ್ಯಾಂಕ್ ವ್ಯವಸ್ಥಾಪಕರು ತಮಗೆ ಸಂಬಂಧವಿಲ್ಲವೆಂದು ವರ್ತಿಸುತಿದ್ದಾರೆ ಎಂದು ಅಳಲು ತೋಡಿಕೊಂಡಿರುವ ರಾಜಾಸಾಬ, ಬ್ಯಾಂಕ್ ಅಧಿಕಾರಿಗಳು ಕೂಡಲೇ ತಮ್ಮ ಖಾತೆಗೆ ಮರಳಿ ಹಣ ಜಮೆಯಾಗುವಂತೆ ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚಿದ್ದಾರೆ.

ಅದೇರೀತಿ ಪಟ್ಟಣದ ಖಾಸಗಿ ಶಾಲೆ ಶಿಕ್ಷಕ ಇಜಾಜ್ ಬಾಬಾ ಮಜಾರ ಇಕ್ಬಾಲ್ ಎಂಬುವರು ಎಸ್’ಬಿಐ ಖಾತೆಯಿಂದ ಇದೇ ಡಿಸೆಂಬರ್ ತಿಂಗಳಲ್ಲಿ ದಿ.2, 4, 6, 9ರಂದು 10 ಸಾವಿರ ರೂಪಾಯಿಯಂತೆ ಏಳುಬಾರಿ ಒಟ್ಟು 74 ಸಾವಿರದ 700 ರೂಪಾಯಿಗಳನ್ನು ಸೈಬರ್ ಖದೀಮರು ಕನ್ನ ಹಾಕಿದ್ದಾರೆ. ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರನ್ನು ಭೇಟಿಯಾಗಿ ಬ್ಯಾಂಕ್ ಖಾತೆಯಿಂದ ಹಣ ಕಡಿತ ಕುರಿತು ಮೆಸೇಜ್ ಮಾಹಿತಿ ಬಂದಿರದ ಬಗ್ಗೆ ವಿಚಾರಿಸಿದರೆ ತಮ್ಮ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಹಣ ದೋಚಿದ್ದಾರೆ. ಇಂತಹ ಸಂದರ್ಭದಲ್ಲಿ ಮೆಸೆಜ್ ಬರುವುದಿಲ್ಲ. ಇದಕ್ಕೆ ನಮ್ಮ ಬ್ಯಾಂಕ್ ಹೊಣೆಯಾಗುವುದಿಲ್ಲ ಎಂದು ಹೇಳಿ ಕೈಚೆಲ್ಲಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ಸಲ್ಲಿಸಿರುವುದಾಗಿ ಶಿಕ್ಷಕ ಇಜಾಜ್ ಬಾಬಾ ಅವರು ತಿಳಿಸಿದ್ದಾರೆ.

ತಾಲೂಕಿನಲ್ಲಿ ಹೀಗೆ ಬಹಳಷ್ಟು ಜನರ ಬ್ಯಾಂಕ್ ಖಾತೆಗಳಿಗೆ ಸೈಬರ್ ಕಳ್ಳರು ಕನ್ನ ಹಾಕಿ ಹಣ ದೋಚಿದ್ದು, ಹಣ ಕಳೆದುಕೊಂಡವರು ಪರದಾಡುತ್ತಿರುವುದು ತಿಳಿದುಬಂದಿದೆ. ವಿಶ್ವಾಸನೀಯ ರಾಷ್ಟ್ರೀಕೃತ ಬ್ಯಾಂಕುಗಳ ಖಾತೆಗಳಲ್ಲಿಯೇ ಹೀಗೆ ಹಣ ಕಳ್ಳತನವಾಗುತ್ತಿದ್ದರೆ ಹಣಕ್ಕೆ ರಕ್ಷಣೆ ನೀಡುವವರಾದರೂ ಯಾರು ಎಂಬ ಪ್ರಶ್ನೆ ಗ್ರಾಹಕರಲ್ಲಿ ಉದ್ಭವವಾಗಿದೆ. ಜನ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಮುನ್ನ ಬ್ಯಾಂಕ್ ಅಧಿಕಾರಿಗಳು ಹಾಗೂ ಸೈಬರ್ ಪೊಲೀಸರು ಬ್ಯಾಂಕ್ ಖಾತೆ ಹ್ಯಾಕ್ ಮಾಡುವ ಸೈಬರ್ ಕಳ್ಳರನ್ನು ಪತ್ತೆಹಚ್ಚಬೇಕು. ಹಣದ ರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.