ನಿಡಶೇಸಿ ಕೆರೆಯಂಗಳ ಬಗೆದು ಹಾಡಹಗಲೇ ಅಕ್ರಮ ಮರಳು ಸಾಗಾಟ, ಕಡಿವಾಣಕ್ಕೆ ಜನ ಒತ್ತಾಯ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿಯ ನಿಡಶೇಸಿ ಕೆರೆ ಅಂಗಳದಲ್ಲಿ ಮರಳು ದಂಧೆಕೋರರು ನಿರ್ಭಯವಾಗಿ ಹಾಡಹಗಲೇ ಕೆರೆ ಬಗೆದು ಅಕ್ರಮ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಕೆರೆಯ ಪಶ್ಚಿಮ ಭಾಗದ ಪ್ರದೇಶ ಹಾಗೂ ವಾಯುವ್ಯ ಭಾಗದ ಪ್ರದೇಶ ಮತ್ತು ಗಜೇಂದ್ರಗಡ ಮುಖ್ಯ ರಸ್ತೆ ಸಮೀಪದ ಕೆರೆಯ ನಡುಗಡ್ಡೆ ಪ್ರದೇಶದಲ್ಲಿ ಸುಮಾರು ಎರಡ್ಮೂರು ಅಡಿ ಆಳ ಮಣ್ಣು ಮಿಶ್ರಿತ ಮರಳಿದೆ. ಅದರ ಅಡಿಯಲ್ಲಿ ಸಿಗುವ ಉತ್ತಮವಾದ ಮರಳಿನ ಪಡಿ ದಂಧೆಕೋರರಿಗೆ ಚಿನ್ನದ ಗಣಿ ಸಿಕ್ಕಂತಾಗಿದೆ.

ಕೆರೆ ಅಂಗಳದ ಒಡಲಿಗೆ ನಿತ್ಯ ಗುದ್ದಲಿ ಹಾಕಿ ಮರಳು ಬಗೆಯಲಾಗುತ್ತಿದೆ. ಟ್ರ್ಯಾಕ್ಟರ್ ಮೂಲಕ ಮರಳನ್ನು ನಿರಂತರ ಸಾಗಿಸಲಾಗುತ್ತಿದೆ. ಸುಮಾರು 227 ಎಕರೇ ವಿಸ್ತಾರ ಹೊಂದಿರುವ ಈ ಕೆರೆ ಪ್ರದೇಶ ಸುತ್ತಲೂ ನಿರ್ಮಿಸಲಾಗಿರುವ ಬಂಡು ಈಗಾಗಲೇ ಒಡೆದು ಹಾಕಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಾಟಕ್ಕೆ ದಾರಿ ಮಾಡಿಕೊಂಡಿದ್ದಾರೆ. ಪಕ್ಷಿಗಳಿಗೆ ಅನುಕೂಲವಾಗಲೆಂದು ಬಂಡಿನಲ್ಲಿ ನೆಡಲಾಗಿದ್ದ ಹಣ್ಣಿನ ಗಿಡಗಳನ್ನು ಮುರಿದಿದ್ದಾರೆ ಎಂದು ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ತಿಳಿಸಿದರು.

ಮೂರ್ನಾಲ್ಕು ವರ್ಷಗಳ ಹಿಂದೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಪುನಶ್ಚೇತನ ಕಾರ್ಯ ಕೈಗೊಂಡಿದ್ದಾಗ ಆಗಿನ ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಯ ಸರ್ವೆ ಕಾರ್ಯ ಕೈಗೊಂಡು ಸುಮಾರು 23 ಎಕರೆ ಮರಳು ಇರುವ ಪ್ರದೇಶವನ್ನು ಗುರುತಿಸಿದ್ದರು.
ಕೆರೆ ಪುನಶ್ಚೇತನ ಗೊಂಡ ಬಳಿಕ ಉತ್ತಮ ಮಳೆಯಾಗಿ ಕೆರೆ ಮೈತುಂಬಿಕೊಂಡಿತ್ತು. ವಿದೇಶಿ ಪಕ್ಷಿಗಳನ್ನು ಸೆಳೆದಿತ್ತು. ಜೊತೆಗೆ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಸೇರಿದಂತೆ ಕೆರೆ ಸುತ್ತಮುತ್ತಲಿನ ಕುಷ್ಟಗಿ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಹಾಗೂ ತೋಟಪಟ್ಟಿಗಳಲ್ಲಿನ ಕೊಳವೇಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿತ್ತು. ಪ್ರಸಕ್ತ ವರ್ಷ ಮಳೆ ಕೈಕೊಟ್ಟ ಪರಿಣಾಮ ಕೆರೆಯ ಪಶ್ಚಿಮ ಭಾಗದ ಪ್ರದೇಶದಲ್ಲಿ ನೀರು ಬತ್ತಿದ ಪರಿಣಾಮ. ಎರಡು ವರ್ಷಗಳ ಕಾಲ ಹಸಿದು ಕುಳಿತಿದ್ದ ಮರಳು ದಂಧೆಕೋರರು ಬತ್ತಿದ ಕೆರೆಯ ಒಡಲಿಗೆ ಗುದ್ದಲಿ ಹಾಕಿ ಮರಳು ಲೂಟಿ ಮಾಡುತ್ತಿದ್ದಾರೆ. ಮಾದ್ಯಮದಲ್ಲಿ ಈ ಕುರಿತು ವರದಿಗಳು ಪ್ರಕಟವಾದರೂ ಸಣ್ಣ ನೀರಾವರಿ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆ ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ.

ಕೆರೆಯ ಮುಖ್ಯ ಬಂಡಿನಲ್ಲಿ ಮಾತ್ರ ನೀರು ಸಂಗ್ರಹವಿದ್ದು,. ವಾಸ್ತವ್ಯ ಹೂಡಿರುವ ವಿದೇಶಿ ಹಾಗೂ ಸ್ಥಳೀಯ ಪಕ್ಷಿಗಳು ಟ್ರ್ಯಾಕ್ಟರ್’ಗಳ ಸದ್ದಿಗೆ ಸ್ಥಳದಿಂದ ಹೊರಡುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು ಕೆರೆ ಹಾಗೂ ಪ್ರಾಣಿ ಪಕ್ಷಿಗಳ ರಕ್ಷಣೆಗೆ ಮುಂದಾಗಬೇಕು ಎಂಬುದು ಪಕ್ಷಿ ಪ್ರೇಮಿಗಳ ಒತ್ತಾಯವಾಗಿದೆ.

ನಿಡಶೇಸಿ ಕೆರೆ ಅಂಗಳಕ್ಕೆ ಭೇಟಿ ನೀಡಿರುವೆ. ಆದರೆ, ಮರಳು ಸಾಗಿಸುತ್ತಿರುವವರಾರು ಸಿಗಲಿಲ್ಲ. ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಯಾರಾದರೂ ಸುಳಿವು ಕೊಟ್ಟರೆ ಮರಳು ಲೂಟಿಕೋರರನ್ನು ರೆಡ್ಯಾಂಡಾಗಿ ಹಿಡಿದು ಕಾನೂನು ಕ್ರಮಕೈಗೊಳ್ಳಲಾಗುವದು

– ಶೃತಿ ಮಳ್ಳಪ್ಪಗೌಡರ, ತಹಸೀಲ್ದಾರರು ಕುಷ್ಟಗಿ.