ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಹಳೆಯದಾದ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿದ್ದು, ಅವುಗಳನ್ನು ಬದಲಾಯಿಸಬೇಕು ಎಂದು ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಒಂದನೇ ವಾರ್ಡಿನಲ್ಲಿ ಜೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಅಳವಡಿಸಿರುವ ದುರಸ್ತಿಗೊಳಪಟ್ಟ ಸಿಮೆಂಟ್ ಕಂಬಗಳು ಇವಾಗಿವೆ.
ಸುಮಾರು ಮೂವತ್ತೈದು ವರ್ಷಗಳ ಹಿಂದೆ ಈ ಕಂಬಗಳನ್ನು ಅಳವಡಿಸಲಾಗಿತ್ತು. ಹಳೇಯ ಕಂಬಗಳಾಗಿರುವದರಿಂದ ಕಂಬಗಳ ನೆಲಮಟ್ಟದ ಭಾಗದಲ್ಲಿ ಸಿಮೆಂಟ್ ಕಳಚಿ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಕಾಣಿಸಿಕೊಂಡಿವೆ. ಇದರಿಂದ ಮಳೆಗಾಲದಲ್ಲಿ ಕಂಬದ ಬಳಿ ದನಕರುಗಳು, ಮಕ್ಕಳು ಸಂಚರಿಸುವಾಗ ಅರ್ತಿಂಗ್ ಪಾಸಾಗುತ್ತಿದೆ. ಸಂದಿ, ಇಕ್ಕೆಲಗಳ ರಸ್ತೆ ಹೊಂದಿರುವ ಈ ಓಣಿ ಮಳೆಯಾದಾಗ ಜೀವ ಭಯದಲ್ಲಿ ಮನೆಗಳಿಂದ ಯಾರು ಆಚೆ ಬರುವುದಿಲ್ಲ ಎಂದು ಗ್ರಾಮಸ್ಥರು ಮಾಧ್ಯಮ ಮುಂದೆ ಅಳಲು ತೋಡಿಕೊಂಡರು.
ಯಾವ ಸಂದರ್ಭದಲ್ಲಾದರೂ ಕಂಬಗಳು ಮುರಿದು ಬೀಳವ ಸಾಧ್ಯತೆಯಿದೆ. ಇದರಿಂದ ದೊಡ್ಡ ಅವಘಡವೇ ಸಂಭವಿಸಿ ಜೀವ ಹಾನಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದುರಸ್ತಿಗೆ ಒಳಪಟ್ಟ ಹಳೇ ಕಂಬಗಳನ್ನು ಬದಲಾಯಿಸಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಪತ್ರ ವ್ಯವಹಾರ ಮಾಡಲಾಗಿದೆ. ಜೊತೆಗೆ ಮೌಖಿಕವಾಗಿಯೂ ಗ್ರಾಮ ಪಂಚಾಯಿತಿ ಸದಸ್ಯರು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂಧಿಸುತ್ತಿಲ್ಲ
– ಮಲ್ಲಪ್ಪ ಕುಂಬಾರ
ಪಿ.ಡಿ.ಒ. ಗ್ರಾಮ ಪಂಚಾಯಿತಿ, ಗುಮಗೇರಾ.
ಹಳೇಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಲು ಈಗಾಗಲೇ ಎಸ್ಟಿಮೇಂಟ್ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅಪ್ರೂವಲ್ ಬಂದನಂತರ ಇನ್ನೊಂದು ತಿಂಗಳೊಳಗೆ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗುವದು
– ಸೈಯದ್ ತಾಜುದ್ದಿನ್,
ಶಾಖಾಧಿಕಾರಿ, ಜೆಸ್ಕಾಂ ಉಪ ವಿಭಾಗ ಕುಷ್ಟಗಿ.