ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಸಿದ್ಧೇಶ್ವರ ಸ್ವಾಮಿಗಳ ಜ್ಞಾನ ಸಂಪತ್ತನ್ನು ನಾವೆಲ್ಲರೂ ಅರಿಯುವ ಪ್ರಯತ್ನ ಮಾಡಬೇಕು. ಸಿದ್ಧೇಶ್ವರ ಸ್ವಾಮಿಗಳು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸಿ ನಡೆದರೆ ಸನ್ಮಾರ್ಗ ದೊರೆಯಲಿದೆ ಎಂದು ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಅವರು ಹೇಳಿದರು.
ಅವರು ಪಟ್ಟಣದ ನಿಲೋಗಲ್ಲ ಸಭಾ ಭವನದಲ್ಲಿ ಜ.6 ಶನಿವಾರ ದಂದು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕುಷ್ಟಗಿ ಇವರ ಸಹಯೋಗದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ನುಡಿನಮನ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿದ್ಧೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸುವಂತಹ ಭಾಗ್ಯ ಕಲ್ಪಿಸಿಕೊಟ್ಟಿರುವ ಶ್ರೀ ಪುಟ್ಟರಾಜ ಸಂಗೀತ ಪಾಠಶಾಲೆ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು.
ಸಂಗೀತ ಕಲಾವಿದ ಹನುಮಪ್ಪ ಸಿದ್ದಪ್ಪ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಮುಖೇಶ್ ನಿಲೋಗಲ್ಲ, ರವೀಂದ್ರ ಬಾಕಳೆ, ಶರಣಪ್ಪ ಲೈನದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಶರಣಪ್ಪ ಆಡೂರು, ಶಿಕ್ಷಕ ಮಹೇಶ ಹಡಪದ ಉಪಸ್ಥಿತರಿದ್ದರು.
ಕಲಾವಿದ ಸುಖಮುನಿ ಗುಮಗೇರಿ ಅವರು ಜಾನಪದ ಹಾಗೂ ವಚನ ಗಾಯನ ಪ್ರಸ್ತುತ ಪಡಿಸಿದರು. ಕಲಾವಿದರಾದ ಅಯ್ಯಪ್ಪ ಬಡಿಗೇರ ಹಾರ್ಮೋನಿಯಮ್, ಪ್ರಥಾಪ ಹಿರೇಮಠ ತಬಲಾ ಸಾತ್ ನೀಡಿದರು. ಕಾರ್ಯಕ್ರಮದಲ್ಲಿ ನೂರಾರುಜನ ಶ್ರೋತೃಗಳು ಪಾಲ್ಗೊಂಡಿದ್ದರು.