ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡಗಳು ಮಾಯವಾಗುತ್ತವೆ. ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ ಎಂದು ಮಹಿಳಾ ಸಂಘದ ಪ್ರಮುಖೆ ಗಿರಿಜಾ ಅಮರೇಶ ಹಿರೇಮಠ ಅವರು ಹೇಳಿದರು.
ಅವರು ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಜ.5 ಶುಕ್ರವಾರ ದಂದು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕುಷ್ಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ 2023-24ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯದ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ಗಾನಜ್ಯೋತಿ ಸಂಗೀತ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ ವಿದ್ಯಾಭ್ಯಾಸ ಮಾಡಿಸುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸಿ ಏಕಾಗ್ರತೆ ಬರುತ್ತದೆ. ಆದರೆ, ಬಹುತೇಕ ಮಕ್ಕಳು ಟಿವಿ, ಮೊಬೈಲ್‌ನಂಥ ವಸ್ತುಗಳ ಮೇಲೆ ವ್ಯಾಮೋಹ ಹೊಂದಿದ್ದಾರೆ. ಅಂಥವರಲ್ಲಿ ಸಂಗೀತದ ಆಸಕ್ತಿ ಬೆಳೆಸಬೇಕು ಎಂದರು.
ಹನುಮಪ್ಪ ಸಿದ್ದಪ್ಪ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ ಕುಮಾರಸ್ವಾಮಿ ಹಿರೇಮಠ, ಸುಮಂಗಳಾ ಕುದರಿ, ಅನುಸೂಯಾ ಮೋತಿಲಾಲ ಸಿಂಗ್ರಿ, ಸುಹಾಸಿನಿ ಸುರೇಂದ್ರ ಮಡಿವಾಳರ, ಮಲ್ಲಮ್ಮ ಹನುಮಂತಪ್ಪ ರೆಡ್ಡಿ, ಜ್ಯೋತಿ ಬಸವಕುಮಾರ, ಕಳಕಮ್ಮ ನಾಗರಾಜ ನಾಲಗಾರ ಉಪಸ್ಥಿತರಿದ್ದರು.
ಕಲಾವಿದರಾದ ಹನುಮಂತಪ್ಪ ಜಾಲಿಮರದ, ಸುಖಮುನಿ ಗುಮಗೇರಿ ಅವರು ಜಾನಪದ ಹಾಗೂ ವಚನ ಗಾಯನ ಪ್ರಸ್ತುತ ಪಡಿಸಿದರು. ಕಲಾವಿದರಾದ ಅಯ್ಯಪ್ಪ ಬಡಿಗೇರ ಹಾರ್ಮೋನಿಯಮ್, ಪ್ರಥಾಪ ಹಿರೇಮಠ ತಬಲಾ ಸಾತ್ ನೀಡಿದರು. ಕಾರ್ಯಕ್ರಮದಲ್ಲಿ ನೂರಾರುಜನ ಶ್ರೋತೃಗಳು ಪಾಲ್ಗೊಂಡಿದ್ದರು.