ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಕನಕಧಾಮ ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಬಾಗೂರು ಚನ್ನಕೇಶವ ದೇವಸ್ಥಾನ ಪ್ರವೇಶಿಸಿ ತೆರಳಿದ ಬಳಿಕ ದೇವಸ್ಥಾನ ಶುಚಿಗೊಳಿಸಿರುವುದು ಖಂಡನೀಯ. ಸಂವಿಧಾನಕ್ಕೆ ವಿರುದ್ಧವಾಗಿ ಜಾತಿ ಪದ್ಧತಿ ಜೀವಂತವಾಗಿಟ್ಟಿರುವ ಕುರಿತು ನನ್ನ ಇಲಾಖೆಯ ಕಾರ್ಯದರ್ಶಿಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಸಿ. ಮಹದೇವಪ್ಪ ಅವರು ಹೇಳಿದರು.
ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಧ್ಯೆ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಹೂಮಾಲೆ ಸಮರ್ಪಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ದೇಶದ ಚರಿತ್ರೆಯಲ್ಲಿ ಜಾತಿ ವ್ಯವಸ್ಥೆ ಒಪ್ಪಿಕೊಂಡು ಧಾರ್ಮಿಕ ಆಚರಣೆ ಮಾಡುತ್ತಿದ್ದೇವೆ. ಮುಂದುವರೆದ ಸಮಾಜಗಳು ಜಾತಿ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುತ್ತಿವೆ. ತಳಸ್ಥರ ಜಾತಿಗಳು ತಮ್ಮ ಹಕ್ಕುಗಳಿಗೋಸ್ಕರ ಸಂವಿಧಾನದ ಆಶಯ ಈಡೇರಬೇಕು ಎನ್ನುತ್ತಾರೆ. ಆದರೆ, ವೈದಿಕ ವ್ಯವಸ್ಥೆ ಇಂದಿಗೂ ಶೂದ್ರ ಸಮುದಾಯವನ್ನು ಎರಡನೇ ದರ್ಜೆಯ ಜನಾಂಗವನ್ನಾಗಿ ಕಾಣುವ ಪ್ರವೃತ್ತಿ ಹೊಂದಿದೆ. ಈ ವ್ಯವಸ್ಥೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹೋರಾಟ ಮಾಡಿದ್ದಾರೆ. ಅಂಬೇಡ್ಕರ್, ಕನಕದಾಸರನ್ನು ದೇವಸ್ಥಾನ ಪ್ರವೇಶಿಸಲಿಕ್ಕೆ ಬಿಡಲಿಲ್ಲ. ಬಸವಣ್ಣನವರ ಹೇಳಿರುವ ವಚನ ಶೂದ್ರರು ತಿಳಿಯಬೇಕು. ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಅವಕಾಶ ಕೊಟ್ಟಿದ್ದರೂ ವೈದಿಕ ವ್ಯವಸ್ಥೆ ಜಾತಿ ಪದ್ಧತಿ ಜೀವಂತವಾಗಿಟ್ಟಿರುವುದು ಖಂಡನೀಯ. ಸಂವಿಧಾನಕ್ಕೆ ಕಾನೂನಿಗೆ ವಿರುದ್ಧವಾಗಿ ಸ್ವಾಮೀಜಿಯನ್ನು ದೇವಸ್ಥಾನ ಪ್ರವೇಶ ತಡೆದು ಬಳಿಕ ಶುಚಿಗೊಳಿಸಿರುವ ಕುರಿತು ನನ್ನ ಇಲಾಖೆಯ ಕಾರ್ಯದರ್ಶಿ ನೀಡಿದ ವರದಿ ಪರಿಶೀಲಿಸಿದ ಬಳಿಕ ಕ್ರಮಕೈಗೊಳ್ಳುವುದಾಗಿ ಸಚಿವ ಮಹದೇವಪ್ಪ ಹೇಳಿದರು.
ಡಿ.ಕೆ. ಸುರೇಶ ಅವರ ಪ್ರತ್ಯೇಕ ರಾಷ್ಟ್ರ ಕೂಗು ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಆದರೆ, ಕರ್ನಾಟಕದಿಂದ ತೆರಿಗೆ ಪಡೆಯುವ ಕೇಂದ್ರ ಸರ್ಕಾರ ನ್ಯಾಯಸಮ್ಮತವಾಗಿ ನಮ್ಮ ರಾಜ್ಯಕ್ಕೆ ಅನುದಾನ ಕೋಡಿ ಎಂದು ಮಂಡಿಸುವಾಗ ಪ್ರತ್ಯೇಕದ ಕುರಿತು ವ್ಯಾಖ್ಯಾನ ಮಾಡಿರಬಹುದು ಎಂದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಪೇರಿಯಾರ್ ಅವರು ಪ್ರತ್ಯೇಕ ದ್ರಾವಿಡ ರಾಷ್ಟ್ರ ಕಟ್ಟಬೇಕು ಹಾಗೂ ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದಿದ್ದರು. ಆದರೆ, ಭಾರತದಲ್ಲಿ 500ಕ್ಕೂ ಹೆಚ್ಚು ರಾಜರ ಸಂಸ್ಥಾನಗಳು ಗಣತಂತ್ರ ವ್ಯವಸ್ಥೆಗೆ ಒಳಗೊಂಡವು ಎಂದರು. ಡಿ.ಕೆ.ಸುರೇಶ್ ಹೇಳಿಕೆಗೆ ಸಮರ್ಥನೆಯೇ ಎಂದು ಮಾಧ್ಯಮ ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಸಚಿವ, ನಾನು ಸುರೇಶ್ ಹೇಳಿಕೆ ಸಮರ್ಥನೆ ಮಾಡುತ್ತಿಲ್ಲ. ರಾಷ್ಟ್ರ ಗಣತಂತ್ರ ವ್ಯವಸ್ಥೆಯ ಕುರಿತು ಮಾತನಾಡಿರುವೆ ಎಂದರು.
ನೂರು ರಾಮ, ಹನುಮ ಮಂದಿರ ನಿರ್ಮಿಸುವ ಸರ್ಕಾರದ ಯೋಚನೆ ಬಿಜೆಪಿಗೆ ಸೆಡ್ಡು ಹೊಡೆಯುವ ತಂತ್ರವೆ ಎಂದು ಪ್ರಶ್ನಿಸಿದಾಗ ಸಚಿವ ಎಚ್.ಸಿ.ಮಹದೇವಪ್ಪ ಅವರು ಪ್ರತಿಕ್ರಿಯಿಸದೇ ತೆರಳಿದರು.
ಈ ವೇಳೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರು, ಮುಖಂಡ ಮುಕುಂದರಾವ್ ಭವಾನಿಮಠ ಸೇರಿದಂತೆ ಚಲುವಾದಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.
ದೇಶದ ಚರಿತ್ರೆಯಲ್ಲಿ ಜಾತಿ ವ್ಯವಸ್ಥೆ ಒಪ್ಪಿಕೊಂಡು ಧಾರ್ಮಿಕ ಆಚರಣೆ ಮಾಡುತ್ತಿದ್ದೇವೆ. ಮುಂದುವರೆದ ಸಮಾಜಗಳು ಜಾತಿ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುತ್ತಿವೆ. ತಳಸ್ಥರ ಜಾತಿಗಳು ತಮ್ಮ ಹಕ್ಕುಗಳಿಗೋಸ್ಕರ ಸಂವಿಧಾನದ ಆಶಯ ಈಡೇರಬೇಕು ಎನ್ನುತ್ತಾರೆ. ಆದರೆ, ವೈದಿಕ ವ್ಯವಸ್ಥೆ ಇಂದಿಗೂ ಶೂದ್ರ ಸಮುದಾಯವನ್ನು ಎರಡನೇ ದರ್ಜೆಯ ಜನಾಂಗವನ್ನಾಗಿ ಕಾಣುವ ಪ್ರವೃತ್ತಿ ಹೊಂದಿದೆ.
– ಡಾ. ಎಚ್.ಸಿ. ಮಹದೇವಪ್ಪ, ಸಚಿವರು ಸಮಾಜ ಕಲ್ಯಾಣ ಇಲಾಖೆ.