ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಲೋಕಸಭೆಯಲ್ಲಿ ಗೆಲ್ಲುವ ಸಾಧ್ಯತೆ ಯಾರಿಗಿದೆಯೋ ಅವರಿಗೆ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಆಧ್ಯತೆ ನೀಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ತಿಳಿಸಿದ್ದಾರೆ.
ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಭಾನುವಾರ ಲೋಕಸಭಾ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಬದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಮಂತ್ರಿಯನ್ನು ವೀಕ್ಷಕನನ್ನಾಗಿ ನೇಮಕ ಮಾಡಲಾಗಿದೆ. ಆಯಾ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಶಾಸಕರು, ಮುಖಂಡರಿಂದ ಮಾಹಿತಿ ಪಡೆದಿರುತ್ತಾರೆ. ಅದೇರೀತಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಅಮರೇಗೌಡ ಪಾಟೀಲ್ ಬಯ್ಯಾಪೂರು ಸೇರಿದಂತೆ ಮೂರು ಜನರ ಹೆಸರನ್ನು ಶಿಪಾರಸ್ಸು ಮಾಡಲಾಗಿದೆ. ಕೇಂದ್ರದ ಲೋಕಸಭಾ ಚುನಾವಣಾ ಕಮಿಟಿ ಈಗಾಗಲೇ ರಾಜ್ಯದ ರಾಜಧಾನಿಯಲ್ಲಿ ಕಳೆದ ವಾರ ನಡೆಸಿದ ಸಭೆಯಲ್ಲಿ ಪ್ರತಿಯೊಬ್ಬರ ಹೆಸರು ಚರ್ಚೆ ಮಾಡಲಾಗಿದೆ. ಜನರಲ್ಲಿ ಯಾರಿಗೆ ಹೆಚ್ಚು ಒಲವಿದೆ, ಅಭಿಪ್ರಾಯ ಹೇಗಿದೆ ಎಂಬುದನ್ನು ವೀಕ್ಷಕರಿಂದ ಅಭಿಪ್ರಾಯ ತೆಗೆದುಕೊಳ್ಳಲಿದ್ದು, ಅದು ಗೌಪ್ಯವಾಗಿರುತ್ತದೆ. ಇಲ್ಲಿ ನಮ್ಮವರು ಎಂಬ ಲಾಭಿ ಒತ್ತಡ ನಡೆಯುವುದಿಲ್ಲ. ಗೆಲ್ಲುವ ಸಾಧ್ಯತೆ ಯಾರಿಗಿದೆಯೋ ಅವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ಈ ವೇಳೆ ತಾವರಗೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಮುಖಂಡರಾದ ಮುಕುಂದರಾವ್ ಬವಾನಿಮಠ, ಮಾಲತಿ ನಾಯಕ, ಅಮರೇಗೌಡ ಪಾಟೀಲ್ ಜಾಲಿಹಾಳ, ಪುರಸಭೆ ಸದಸ್ಯ ಮೈನುದ್ದಿನ್ ಮುಲ್ಲಾ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.