ನಿಷೇಧಿತ ‘ಡಿಜೆ’ ಸೌಂಡ್ ಗೆ ಬೆಪ್ಪನಾದ ಗಣನಾಯಕ !

ಕುಷ್ಟಗಿ : ಸಾತ್ವಿಕ ಪೂಜೆ, ನೈವೇದ್ಯ ಸಲ್ಲಿಸಿದರೆ ಸಾಕು ಗಣೇಶ ವಿಘ್ನಗಳನ್ನು ಕಳೆದು ಸುಖ ಶಾಂತಿ ಕರುಣಿಸುತ್ತಾನೆ ಎಂಬುದು ನಂಬಿಕೆ. ಆದರೆ, ಪುಂಡರ ಡಿಜೆ ಸೌಂಡ್ ಹುಚ್ಚಾಟಕ್ಕೆ ಗಣೇಶ ಬೆಪ್ಪಾಗಿದ್ದಾನೆ.

ಹೌದು.., ಎಲ್ಲೆಡೆ ಗಣೇಶ ಚತುರ್ಥಿ ನೆಪದಲ್ಲಿ ಕೆಲ ಕಿಡಿಗೇಡಿಗಳು ಅಪ್ತಾ ವಸೂಲಿಗೆ ಇಳಿದಿರುವುದು ಒಂದೆಡೆಯಾದರೆ, ಇನ್ನೂ ಕೆಲ ಯುವಕರು ಸಮೂಹ ರಚಿಸಿಕೊಂಡು ರಾಜಕಾರಣಿಗಳ ಸಹಕಾರ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕೆಇಬಿ, ಸ್ಥಳೀಯ ಪುರಸಭೆ ಹೀಗೇ ಸಂಬಂಧಿಸಿದ ಇಲಾಖೆಗಳ ಪರವಾನಗಿ ಪಡೆಯುತ್ತಾರೆ.

ಆದರೆ, ನಿಯಮಗಳನ್ನು ಗಾಳಿಗೆ ತೂರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ವಿಪರೀತ ಶಬ್ಧಮಾಲಿನ್ಯ ಮಾಡುವ ಮನೆಗೋಡೆಗಳು ಅದುರುವಂತೆ ಶಭ್ಧ ಸೂಸುವ ಡಿಜೆ ಸೌಂಡ್ ಬಳಸುತಿದ್ದಾರೆ. ಇದರಿಂದ ಶಿಶುಗಳು, ಹೃದ್ರೋಗಿಗಳು, ಅಸ್ತಮಾ, ಕ್ಷಯರೋಗದಿಂದ ಬಳಲುತ್ತಿರುವವರ ಪಾಡೇನು ಅವರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತಿದ್ದಾರೆ.

ಕುಷ್ಟಗಿ ಪಟ್ಟಣದಲ್ಲಿ ಭಾನುವಾರ ಸಂಜೆ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಜನ ತತ್ತರಿಸಿದರು. ಇಲ್ಲಿನ ಗಜೇಂದ್ರಗಡ ಮುಖ್ಯರಸ್ತೆ ಮಾರುತಿ ವೃತ್ತದಿಂದ ಕನಕದಾಸ ವೃತ್ತದ ವರೆಗೂ ಆಸ್ಪತ್ರೆಗಳಿವೆ. ಅದರಲ್ಲೂ ಚಿಕ್ಕಮಕ್ಕಳ ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸರಕಾರಿ ಆಸ್ಪತ್ರೆ ಇದೆ. ನಿತ್ಯ ರೋಗಿಗಳು ಚಿಕಿತ್ಸೆಗೆ ದಾಖಲಾಗುತಿದ್ದಾರೆ. ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ ಎಂಬ ಪರಿಜ್ಞಾನ ಇಲ್ಲದಂತಾಗಿದೆ. ಗಣೇಶ್ ಮೂರ್ತಿ ಮೆರವಣಿಗೆಯ ಡಿಜೆ ಸೌಂಡ್ ಮತ್ತು ಪಟಾಕಿ ಶಬ್ಧ ಆರೋಗ್ಯವಂತರನ್ನು ಬೆಚ್ಚಿ ಬೀಳಿಸುತ್ತಿದೆ. ಪುಂಡರ ಡಿಜೆ ಸೌಂಡ್ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ಮಾತ್ರ ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

– ಸಂಗಮೇಶ ಮುಶಿಗೇರಿ