IPL ಕಪ್ ಹೊತ್ತು ಗಮನ ಸೆಳೆದ RCB ಗಣಪ | ಡಿಬಿ ಮೆಚ್ಚುಗೆ

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ : ಪ್ರತಿ ವರ್ಷ ವಿಭಿನ್ನ ಕಲಾತ್ಮಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾ ಜನರ ಮೆಚ್ಚುಗೆ ಗಳಿಸುತ್ತಿರುವ ನಗರದ ಶ್ರೀ ದುರ್ಗಾ ಕಾಲೋನಿಯ ಶ್ರೀ ಬೀರಲಿಂಗೇಶ್ವರ ಗಜಾನನ ಬಳಗದ ಯುವಕರು 07ನೇ ವರ್ಷದ ಗಣೇಶೋತ್ಸವದಲ್ಲಿ ಈ ಬಾರಿ RCB ಕಪ್ಪು ಹಿಡಿದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಸಂಭ್ರಮಾಚರಣೆಯ ದಿನಗಳಲ್ಲಿ ಶ್ರೀ ಬೀರಲಿಂಗೇಶ್ವರ ಗಜಾನನ ಬಳಗದ ಯುವಕರು ಇಲ್ಲಿನ ಶ್ರೀ ಕಟ್ಟಿ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಜರ್ಸಿ ಉಡುಪು ತೊಟ್ಟು ಐಪಿಎಲ್ ಕಪ್ ಹೊತ್ತುಕೊಂಡು ಪ್ರದರ್ಶಿಸುತ್ತಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.

ಯುವಕರ ಸೃಜನಶೀಲತೆ ಗಮನಿಸಿದ ಕ್ರೀಡಾ ಪ್ರೇಮಿ ಯುವನಾಯಕ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ ಅವರು ಭಾನುವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು. ಈ ವೇಳೆ ಶ್ರೀ ಬೀರಲಿಂಗೇಶ್ವರ ಗಜಾನನ ಬಳಗದ ವತಿಯಿಂದ
ಯುವನಾಯಕ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ, ಮುಖಂಡರಾದ ಸೋಮಶೇಖರ ವೈಜಾಪೂರ, ಭಾಷುಸಾಬ ಕಾಯಗಡ್ಡಿ, ಯಮನೂರ ಸಂಗಟಿ ಮತ್ತು ನೀಲಪ್ಪ ಆಡಿನ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ಗಜಾನನ ಬಳಗದ ನಿಂಗಪ್ಪ ಗುರಿಕಾರ, ಪರಶುರಾಮ ಕೋರಿ, ಹೊಳಿಯಪ್ಪ ಕಟ್ಟಿಹೂಲ, ಮುತ್ತಪ್ಪ ತೊಂಡಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಜೆ ಆರ್’ಸಿಬಿ ಗಣಪನನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡಲಾಯಿತು.