ಸುದ್ದಿ ಬೆಳಕಿಂಡಿ |
ಸಂಗಮೇಶ ಮುಶಿಗೇರಿ..
ಕುಷ್ಟಗಿ : ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಸದೃಢರಾಗಬೇಕು ಎಂದು ಪ್ರಾಚಾರ್ಯ ಡಾ. ಎಸ್.ವ್ಹಿ. ಡಾಣಿ ಅವರು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪು ಸಭಾಂಗಣದಲ್ಲಿ ಸೋಮವಾರ ಕಾಲೇಜು ಐಕ್ಯೂಎಸಿ ಮತ್ತು ಎನ್.ಎಸ್.ಎಸ್ ಘಟಕ ವತಿಯಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ತಡೆಗಟ್ಟಲು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುಂದುತ್ತಿರುವುದರ ಬಗ್ಗೆ ಮಾತನಾಡಿದ ಅವರು, ತಮ್ಮಲ್ಲಿರುವ ನೋವುಗಳನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಬೇಕು. ಮನಸ್ಸಿನಲ್ಲಿ ಇಟ್ಟುಕೊಂಡರೆ ಸಮಸ್ಯೆಗಳಿಗೆ ಪರಿಹಾರ ದೊರಕುವುದಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮಾನಸಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಪ್ರಾಧ್ಯಾಪಕರು ಮುಂದಾಗುತ್ತಾರೆ. ಜೊತೆಗೆ ವಿದ್ಯಾರ್ಥಿಗಳು ಸಹ ಸ್ವಯಂ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಕಾರ್ಯಪಡೆ ಅಧಿಕೃತ ವೆಬ್ ಸೈಟ್‌ದಲ್ಲಿನ ಪ್ರಶ್ನಾವಳಿಗಳನ್ನು ಪ್ರಚುರಪಡಿಸುತ್ತಿದೆ. ರಾಷ್ಟ್ರೀಯ ಕಾರ್ಯಪಡೆ ರಚಿಸಿರುವ ಪ್ರಶ್ನಾವಳಿಗಳ ಸಮೀಕ್ಷೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪ್ರಾಚಾರ್ಯ ಡಾ.ಎಸ್.ವ್ಹಿ. ಡಾಣಿ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕಿ ಶ್ರೀಮತಿ ವಿದ್ಯಾವತಿ ಗೋಟೂರ್, ಎನ್.ಎಸ್.ಎಸ್. ಸಂಚಾಲಕ ಭೋಜರಾಜ ಎಸ್, ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಕೋಳೂರ ಹಾಗೂ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.