ಬೆಂಗಳೂರು-ಹೊಸಪೇಟೆ ರೈಲು ಸಂಚಾರ ಕುಷ್ಟಗಿ ವರೆಗೂ ವಿಸ್ತರಿಸಿ

ಸುದ್ದಿ ಬೆಳಕಿಂಡಿ |

ಸಂಗಮೇಶ ಮುಶಿಗೇರಿ..

ಕುಷ್ಟಗಿ : ಬೆಂಗಳೂರು- ಹೊಸಪೇಟೆವರೆಗೆ ಸಂಚರಿಸುವ ರೈಲು (ಗಾಡಿ ಸಂಖ್ಯೆ;56519/56520) ಕೊಪ್ಪಳ, ತಳಕಲ್, ಕುಕನೂರು, ಯಲಬುರ್ಗಾ ಮೂಲಕ ಕುಷ್ಟಗಿವರೆಗೂ ವಿಸ್ತರಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಸೋಮವಾರ ಮನವಿ ಸಲ್ಲಿಸಿದೆ.

ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮಕ್ಕೆ ಆಗಮಿಸಿದ್ದ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ಪ್ರಮುಖರು ಈ ಕುರಿತು ಬರೆದ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಪ್ರಯಾಣ ಆರಂಬವಾದರೆ’ ಪಕ್ಕದ ತಾಲೂಕುಗಳಾದ ಗಜೇಂದ್ರಗಡ, ಇಲಕಲ್ಲ, ಹುನಗುಂದ ಮತ್ತು ಯಲಬುರ್ಗಾ ತಾಲೂಕಿನ ಹಿರೇವಂಕಲ‌ಕುಂಟ ಹಾಗೂ ಕುಷ್ಟಗಿ ತಾಲೂಕಿನ ರೈಲ್ವೆ ಪ್ರಯಾಣಿಕರಿಗೆ ತುಂಬಾ ಅನಕೂಲವಾಗಲಿದೆ. ಈ ನಿಟ್ಟಿನಲ್ಲಿ ನಿತ್ಯ ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚರಿಸಲು ಕ್ರಮವಹಿಸಿ ಎಂದು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ಸಂಸದ ರಾಜಶೇಖರ ಹಿಟ್ನಾಳ ಅವರು ಬೆಂಗಳೂರು-ಹೊಸಪೇಟೆವರೆಗೆ ಇರುವ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸುವುದು ಸೂಕ್ತವಾಗಿದ್ದು, ರೈಲ್ವೇ ಖಾತೆ ರಾಜ್ಯ ಸಚಿವ ವ್ಹಿ. ಸೋಮಣ್ಣ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ, ಬಾಬು ಘೋರ್ಪಡೆ, ಪುರಸಭೆ ಸದಸ್ಯ ಜೆ.ಜೆ. ಆಚಾರ್, ಮಹಾಂತೇಶ ಮಂಗಳೂರು, ಮಂಜುನಾಥ ಮಹಲಿಂಗಪುರ, ಆಶೀಫ ಡಲಾಯತ್ ಮತ್ತಿತರು ಇದ್ದರು.