(ಕುಷ್ಟಗಿ ತಾಲೂಕಿನ ಪ್ರಸಿದ್ಧ ನೀರಲಕೊಪ್ಪ ಮಸೀದಿ)
– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ ‘ಮೊಹರಂ’ ಹಬ್ಬ ಹಿಂದು-ಮುಸ್ಲಿಂರ ಭಾವೈಕ್ಯತೆ ಸಂಗಮ ಅಂದರೆ ತಪ್ಪಾಗಲಾರದು..!
ನೀರಲಕೊಪ್ಪ ಎಂಬುದು 125 ಕುಟುಂಬಗಳನ್ನು ಹೊಂದಿದ ಪುಟ್ಟ ಗ್ರಾಮ. ಆದರೆ, ಈ ಗ್ರಾಮದಲ್ಲಿನ ಮಸೀದಿ ಮಾತ್ರ ಬಹಳಷ್ಟು ಫೇಮಸ್. ಗ್ರಾಮಸ್ಥರು ಸೇರಿದಂತೆ ಈ ಭಾಗದವರಿಗೆ ಇಲ್ಲಿನ ಮಸೀದಿಯ ದೇವರು ಎಂದರೆ, ಅದರ ಅಷ್ಟೇ ಅಚ್ಚುಮೆಚ್ಚು. ಇಲ್ಲಿನ ಮೊಹರಂ ಹಬ್ಬದಲ್ಲಿ ಎಲ್ಲ ಧರ್ಮದವರು ಪಾಲ್ಗೊಳ್ಳುತ್ತಾರೆ. ಮುಸ್ಲಿಂ ಸಮುದಾಯದವರ ಹಬ್ಬವಾದರೂ ಕೂಡಾ ಯಾವುದೇ ತರಹ ಭೇದ ಮಾತ್ರ ಈ ಗ್ರಾಮದಲ್ಲಿ ಇಲ್ಲವೇ ಇಲ್ಲ. ಇಂತಹ ವೈಶಿಷ್ಟ್ಯತೆಗಳನ್ನು ಹೊಂದಿರುವ ಮೊಹರಂ ಹಬ್ಬದಲ್ಲಿ ಹಿಂದುಗಳೇ ಹೆಚ್ಚಾಗಿ ಪಾಲ್ಗೊಳ್ಳುವುದು ವಿಶೇಷ. ಅತ್ಯಂತ ಶ್ರದ್ಧೆ , ಭಕ್ತಿ , ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಸಹೋದರ ಸಂಬಂಧಿಗಳಂತೆ ಆಚರಣೆಯಲ್ಲಿ ಪಾಲ್ಗೊಂಡು ಎಲ್ಲರೂ ಭಾವೈಕ್ಯತೆ ಸಾರುತ್ತಾರೆ ಎಂದು ತುಗ್ಗಲಡೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಶರಣಪ್ಪ ಬೆಣ್ಣಿ ಪತ್ರಿಕೆಗೆ ಅಭಿಪ್ರಾಯವ್ಯಕ್ತಪಡಿಸಿದರು. ಇಲ್ಲಿನ ಮೊಹರಂ ಕೇವಲ ಈ ಗ್ರಾಮ ಅಥವಾ ಈ ಭಾಗಕ್ಕೆ ಸೀಮಿತವಾಗದೆ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾದಂತದ್ದು. ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಸಾಕಷ್ಟು ಜನ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಮಸೀದಿಗೆ ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಳನ್ನು ಪಡೆದುಕೊಂಡವರು ಸಾಕಷ್ಟಿದ್ದಾರೆ. ಅದೇ ಕಾರಣಕ್ಕಾಗಿಯೇ ಇಲ್ಲಿನ ಮಸೀದಿ ಹಾಗೂ ಇಲ್ಲಿನ ದೇವರು ಪ್ರಸಿದ್ಧಿಯಾಗಿದ್ದು ಎಂದು ಹೇಳುತ್ತಾರೆ ಇಲ್ಲಿನ ನಿವಾಸಿ ಶರಣಪ್ಪ ಗೌಡರ.
ವಿಶೇಷವಾಗಿ ಹಡಗಲಿಯ ಅಂದಾನಗೌಡ ಗೌಡ್ರು ಗುರುಜೀಯವರು ಸೇರಿದಂತೆ ಅವರ ಕುಟುಂಬದವರು ಮತ್ತು ಅವರ ಅಪಾರ ಶಿಷ್ಯ ಬಳಗ ಮೊಹರಂ ಹಬ್ಬದ ಮುನ್ನವೇ ಗ್ರಾಮಕ್ಕೆ ಆಗಮಿಸಿ, ಪ್ರಸಾದ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿ ಸೇವೆಯ ರೀತಿಯಲ್ಲಿ ಮಸೀದಿಗೆ ಕೈಗೊಳ್ಳುವುದು ಹಲವು ವರ್ಷಗಳಿಂದ ನಡೆದು ಬಂದಿರುವ ಪರಂಪರೆ ಕೂಡಾ ಹೌದಾಗಿದೆ. ಈ ಮಸೀದಿಯ (ಅಲಾಯಿ) ಪ್ರಮುಖ ದೇವರನ್ನ ಮೂಲತಃ ತುಗ್ಗಲಡೋಣಿ ಗ್ರಾಮದ ಗಟ್ಟಿ ಮನೆತನದವರು ಅತ್ಯಂತ ಧರ್ಮ ನಿಷ್ಠೆಯಿಂದ ಪೂಜಾ ಮತ್ತು ಆಚರಣೆಗಳಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಇವರಷ್ಟೆ ಸ್ಥಳೀಯರು ಕೂಡಾ ಆಚರಣೆಯಲ್ಲಿದ್ದಾರೆ. ಇಂತಹ ಸಂಭ್ರಮ ಹಾಗೂ ಸಡಗರದ ಮಧ್ಯೆ ಆಚರಿಸಲ್ಪಡುವ ಪವಿತ್ರ ಮೊಹರಂ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಧನ್ಯರಾಗೋಣ..!!
“ನೀರಲಕೊಪ್ಪ ಗ್ರಾಮದಲ್ಲಿ ಜರುಗುವ ಮೊಹರಂ ಆಚರಣೆ ಎಲ್ಲರನ್ನೂ ಒಟ್ಟುಗೂಡಿಸುವುದರ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಬೆಸೆಯುತ್ತಿದೆ.”
ಶಿವರಾಜ ಶರಣಪ್ಪ ಬೆಣ್ಣಿ,
ಅಧ್ಯಕ್ಷರು, ಗ್ರಾ.ಪಂ ತುಗ್ಗಲಡೋಣಿ.