– ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸುಳ್ಳು ಆರಂಭವಾದದ್ದು ಕಾಂಗ್ರೆಸ್ ನಿಂದಲೇ ಅನ್ನುವದನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿದುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕೆಂದು ಬೆಜೆಪಿ ಕುಷ್ಟಗಿ ಮಂಡಲ ಉಪಾಧ್ಯಕ್ಷ ಅಮರೇಗೌಡ ಪಾಟೀಲ್ ಜಾಲಿಹಾಳ ಕಟುವಾಗಿ ಟೀಕಿಸಿದ್ದಾರೆ..!
ಬಿಜೆಪಿ ಮಹಾ ಸುಳ್ಳಿನ ಪಕ್ಷ ಇದಕ್ಕೆ ಚುನಾವಣೆ ಮನ್ನಣೆ ನೀಡಿದರೆ ದೇಶ ಮತ್ತು ರಾಜ್ಯಕ್ಕೆ ಭವಿಷ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕುಷ್ಟಗಿಯಲ್ಲಿ ಭಾನುವಾರ ನಡೆದ ವಿಧಾನ ಪರಿಷತ್ ಚುನಾವಣಾ ಮತಯಾಚನೆ ಸಭೆಯಲ್ಲಿ ನೀಡಿದ ಹೇಳಿಕೆ ಖಂಡಿಸಿ ‘ಕೃಷಿ ಪ್ರಿಯ’ ಪತ್ರಿಕೆಗೆ ಮರು ಹೇಳಿಕೆ ನೀಡಿದರು.
ರಾಯರೆಡ್ಡಿ ಅರೆ ಮಂಪರಿನಲ್ಲಿ ಮಾತನಾಡುವದನ್ನು ನಿಲ್ಲಿಸಬೇಕು. ದೇಶದ ಅಭಿವೃದ್ಧಿ ಕೇವಲ ರಾಯರೆಡ್ಡಿಯವರಂಥ ಮತಿಭ್ರಮಣೆ ಒಳಗಾದವರಿಂದ ಆಗಿದೆಯೆಂದು ಬೀಗುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಈ ಮೊದಲು ತಾವು ಜನತಾ ಪರಿವಾದಲ್ಲಿದ್ದುಕೊಂಡು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು ಕಾಂಗ್ರೆಸ್ ನೀತಿಗಳನ್ನು ವಿರೋಧಿಸಿಕೊಂಡು ಎಂಬುದನ್ನು ಮೊದಲು ಮನಗಾಣಬೇಕಿದೆ. ಈಗಿನ ಹೊಸ ಪೀಳಿಗೆಯ ಯುವಕರ ದಾರಿ ತಪ್ಪಿಸುವ ದರಿದ್ರ ಕೆಲಸವನ್ನು ರಾಯರೆಡ್ಡಿ ಕೂಡಲೇ ಕೈ ಬಿಡಲಿ ಎಂದು ಎಚ್ಚರಿಕೆ ಕೂಡಾ ನೀಡಿದರು..!