ಲಿಂಗಾಯತ ಸಂಸ್ಥೆಯಲ್ಲಿ ಮೊಟ್ಟೆ ಅವಾಂತರ


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಅನುದಾನಿತ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ  ಮೊಟ್ಟೆ ವಿತರಣೆ ಕಾರ್ಯಕ್ರಮವು ಅವಾಂತರವನ್ನು ತಂದೊಡ್ಡಿದೆ. ವಿಶೇಷವಾಗಿ ಲಿಂಗಾಯತ ಸಮುದಾಯದ ಮಠಗಳ ಅಧೀನದಲ್ಲಿರುವ ಬಹುತೇಕ ಶಾಲೆಗಳು ಸರಕಾರದ ಆದೇಶದಿಂದ ಇಕ್ಕಟ್ಟಿಗೆ ಸಿಲುಕಿಕೊಂಡಿವೆ..!

   ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆ ದೃಷ್ಟಿಯಿಂದ ರಾಜ್ಯ ಸರಕಾರವು ಇತ್ತೀಚಿಗೆ 1 ರಿಂದ 8 ನೇ ತರಗತಿ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಣೆಗೆ ಕ್ರಮ ಕೈಗೊಂಡು ಆದೇಶ ಹೊರಡಿಸಿ, ಅನುದಾನ ಬಳಕೆ ಸೂಚನೆ ನೀಡಿ ಕೈ ತೊಳಿದುಕೊಂಡಿತು. ಆದರೆ, ತಮ್ಮ ಮೂಲ ಪರಂಪರೆಯ ಶಿಷ್ಟಾಚಾರ ಮುಂದುವರೆಸಿಕೊಂಡು ಬಂದಿರುವ ಬಹುತೇಕ ವೀರಶೈವ ಲಿಂಗಾಯತ ಮಠಗಳ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಶಾಲೆಗಳು ಮಾತ್ರ ಮೊಟ್ಟೆ ವಿತರಿಸುವ ಆದೇಶದಿಂದ ಸಾಕಷ್ಟು ವಿಚಲಿತವಾಗಿರುದಂತು ಬಹಿರಂಗ ಸತ್ಯ. ಆದೇಶ ಪರಿಪಾಲನೆಗೆ ಮುಂದಾಗದಿದ್ದರೇ, ಇಷ್ಟ ಪಡುವ ಮಗುವಿಗೆ ಕಡ್ಡಾಯವಾಗಿ ಮೊಟ್ಟೆ ವಿತರಿಸಲೇಬೇಕು ಎಂಬ ಸರಕಾರದ ನಿಯಮ ಪರಿಪಾಲನೆಗೆ ವಿರುದ್ಧವಾಗುತ್ತದೆ. ಇಲ್ಲವಾದರೆ, ಸರಕಾರದ ಆದೇಶವನ್ನು ವೈಲೇಶನ್ ಮಾಡಿದಂತಾಗುತ್ತದೆ. ಇಂತಹ ಸಂದ್ಗೀದ್ ಪರಿಸ್ಥಿತಿಯಲ್ಲಿರುವ ಕೆಲ ಶಿಕ್ಷಣ ಸಂಸ್ಥೆಗಳು ಇತ್ತ ಆದೇಶ ಬಿಡುವಂತಿಲ್ಲ.. ಅತ್ತ ಮೊಟ್ಟೆ ಕೊಡುವಂತಿಲ್ಲ.. ಎಂಬ ಸ್ಥಿತಿಯಲ್ಲಿವೆ.

ಮೊಟ್ಟೆ ಸಸ್ಯಹಾರ : ಕೋಳಿ ಮೊಟ್ಟೆ ಸಸ್ಯಹಾರವೆಂದು ಇಲ್ಲಿಯವರೆಗೂ ಬೋಧಿಸಿದ ಅಧ್ಯಾಪಕರು ಮಾತ್ರ ಈ ಸದ್ಯದಲ್ಲಿ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಮೊಟ್ಟೆ ಸಸ್ಯಹಾರ ಎಂದು ಪಾಠ ಬೋಧಿಸಿದವರು, ಕೆಲ ಚೂಟಿ ಮಕ್ಕಳ ಪ್ರಶ್ನೆಗಳಿಗೆ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ. ಮೊಟ್ಟೆ ಸಸ್ಯಹಾರವೇ ಆಗಿದ್ದರೆ ಏತಕ್ಕೆ ಮೊಟ್ಟೆ ವಿತರಿಸುತ್ತಿಲ್ಲವೆಂಬ ಮಕ್ಕಳ ಹಾಗೂ ಕೆಲ ಪಾಲಕರ ಮೊಂಡ ವಾದಕ್ಕೆ ಶಿಕ್ಷಕರು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಆಕಳಿನಿಂದ ಪಡೆಯುವ ಹಾಲನ್ನು ಒಪ್ಪಿಕೊಳ್ಳುವವರು ಕೊಳಿಯಿಂದ ಬರುವ ಮೊಟ್ಟೆ ಏತಕ್ಕೆ ಒಪ್ಪಿಕೊಳ್ಳುತ್ತಿಲ್ಲವೆಂಬ ಕೆಲ ಪಂಡಿತರ ವಾದಕ್ಕೆ ಶಿಕ್ಷಕರ ಬಳಿ ಉತ್ತರ ಇಲ್ಲದಂತಾಗಿದೆ.

ಕಸಿ ಬಿಸಿ : ಶಾಲಾ ಸಂಸ್ಥಾಪನಾ ದಿನದಿಂದ ಇಲ್ಲಿಯವರೆಗೂ ಸಂಸ್ಥೆವೊಳಗಡೆ ಒಮ್ಮೆಯೂ ಸುಳಿದಾಡದ ಕೋಳಿ ಮೊಟ್ಟೆಗಳು ಈ ಸದ್ಯ ಬಿಸಿಯೂಟದ ಪಾತ್ರೆಗಳಲ್ಲಿ ಸದ್ದು ಮಾಡುವುದನ್ನು ಕಂಡ ಕೆಲ ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗ ಮಾತ್ರ ಬೇಯಿಸಿದ ಮೊಟ್ಟೆ ತರಹ ಆಗಿದ್ದಂತು ಸತ್ಯ..!!