ಕಿಷ್ಕಿಂದಾ ಹನುಮ ಮಾಲಾ ಅದ್ಧೂರಿ ಕಾರ್ಯಕ್ರಮಕ್ಕೆ ನಿರ್ಬಂಧ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮಂತನ ಜನ್ಮ ಸ್ಥಳ ಕಿಷ್ಕಿಂದಾ ಪರ್ವತ ಪ್ರದೇಶದಲ್ಲಿ ಪ್ರತಿವರ್ಷ ಜರುಗುವ ಅದ್ಧೂರಿ ‘ಹನುಮ ಮಾಲಾ’ ಕಾರ್ಯಕ್ರಮಕ್ಕೆ ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನಿರ್ಬಂಧ ಹೇರಿದೆ. ಈ ಕುರಿತು ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ ಆದೇಶ ಹೊರಡಿಸಿದ್ದಾರೆ..!

 ರಾಮನ ಬಂಟ ಹನುಮನ ಜನ್ಮ ಸ್ಥಳ ಕಿಷ್ಕಿಂದಾ ಪರ್ವತ ಪ್ರದೇಶದ ಅಂಜನಾದ್ರಿ ದೇವಸ್ಥಾನದಲ್ಲಿ ದಿನಾಂಕ 16-12-2021 ರಂದು ಹನುಮ ಮಾಲಾ ವಿಸರ್ಜನೆಗೆ ನಿಗದಿಯಾಗಿರುವ ಕಾರ್ಯಕ್ರಮವನ್ನು ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ 03-12-2021 ರ ಮಾರ್ಗ ಸೂಚಿಯಂತೆ ಕೋವಿಡ್ ನಿಯಮ ಪಾಲನೆಗೆ ಮುಂದಾಗಿ ಅತ್ಯಂತ ಸರಳ ಹಾಗೂ ಸಾಂಕೇತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಹನುಮ ಮಾಲಾ ಕಾರ್ಯಕ್ರಮದಲ್ಲಿ 30 ರಿಂದ 40 ಸಾವಿರ ಜನ ಹನುಮ ಮಾಲಾಧಾರಿಗಳು ಗಂಗಾವತಿ ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿನ ವೃತ್ತದಲ್ಲಿ ಜರಗುವ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇದರಲ್ಲಿ ಒಮಿಕ್ರಾನ್ ವೈರಸ್ ಭೀತಿಯು ಕೂಡಾ ಸೇರಿಕೊಂಡಿದೆ. ಹನುಮ ಮಾಲಾಧಾರಿಗಳು ಕಿಷ್ಕಿಂದಾ ಪರ್ವತ ಪ್ರದೇಶಕ್ಕೆ ಬಾರದೆ, ತಮ್ಮ ಗ್ರಾಮಗಳಲ್ಲಿ ಹಾಗೂ ತಮ್ಮ ತಮ್ಮ ನಿವಾಸಗಳಲ್ಲಿಯೇ ಸರಳ ಆಚರಣೆಗೆ ಮುಂದಾಗುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ..!!