ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಕೊಪಳ ಜಿಲ್ಲೆಯ ಗಂಗಾವತಿ ಬಳಿಯ ಐತಿಹಾಸಿಕ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಏರಲು ನಿರ್ಬಂಧ ವಿಧಿಸಿರುವ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಸುಮಾರು ಮೂರುವರೆ ಸಾವಿರ ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂದು ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ವಿಭಾಗದ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಸಂಜೀವ ಮರಡಿ ಅವರು ಹೇಳಿದ್ದಾರೆ..!
ಈ ಕುರಿತು ಪಟ್ಟಣದಲ್ಲಿ ಅವರು ಹೇಳಿಕೆ ನೀಡಿರುವ ವಿಡಿಯೋ ತುಣುಕು ಲಭ್ಯವಾಗಿದೆ. ಓಮಿಕ್ರಾನ್ ಸಾಂಕ್ರಾಮಿಕ ಭೀತಿ ಹಿನ್ನೆಲೆ ಬೇರೆ ಜಿಲ್ಲೆಗಳಿಂದ ಬರುವ ಹನುಮ ಮಾಲಾಧಾರಿಗಳಿಗೆ ಅಂಜನಾದ್ರಿ ಬೆಟ್ಟ ಪ್ರವೇಶಕ್ಕೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿ ಆದೇಶ ಹೊರಡಿದ್ದಾರೆ. ಈ ಆದೇಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಜೀವ ಮರಡಿ ಅವರು, ಚುನಾವಣೆ ಹಿನ್ನೆಲೆ ಹಾಗೂ ಇತರೆ ರಾಜಕೀಯ ಪಕ್ಷಗಳ ನಾಯಕರು ಏರ್ಪಡಿಸುವ ಎಲ್ಲ ಕಾರ್ಯಕ್ರಮಗಳನ್ನು ಮೊದಲು ನಿಷೇಧಿಸಲಿ. ಬಳಿಕವಷ್ಟೇ ದೇವಸ್ಥಾನ ಪ್ರವೇಶ ನಿರ್ಬಂಧಿಸುವ ವಿಷಯಕ್ಕೆ ಬರಲಿ ಎಂದು ಅವರು ಹೇಳಿಕೆ ನೀಡಿದ್ದಾರೆ.
ಶ್ರೀರಾಮ ಸೇನೆ ನೇತೃತ್ವದ ಲ್ಲಿಯೇ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು ಮೂರುವರೆ ಸಾವಿರ ಜನ ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಏರಲು ಸಿದ್ಧರಾಗಿದ್ದಾರೆ. ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾಡಳಿತಗಳು ಹೇಗೆ ನಿರ್ಬಂಧ ಹೇರಿದರೂ ಅದನ್ನು ಲೆಕ್ಕಿಸುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಈ ವೇಳೆ ಶ್ರೀರಾಮಸೇನೆ ಕುಷ್ಟಗಿ ತಾಲೂಕು ಅಧ್ಯಕ್ಷ ಪ್ರಮೋದ್ ಬಡಿಗೇರ್, ತಾಲೂಕು ಪ್ರಧಾನ ಕಾರ್ಯದರ್ಶಿ ಯಮನೂರ ಕೋಮಾರ, ಬಸಯ್ಯ ಹಿರೇಮಠ ಹಾಗೂ ಸ್ಥಳೀಯ ಹನುಮ ಮಾಲಾಧಾರಿಗಳು ಉಪಸ್ಥಿತರಿದ್ದರು.