ಕಸಾಪ ತಾಲೂಕಾ ಘಟಕಗಳಿಗೆ ಅಧ್ಯಕ್ಷರಾಗಲು ಸಾಹಿತ್ಯ ಕೃಷಿ ಮಾಡಿರಲೇ ಬೇಕು !?

 

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಕಸಾಪ ಜಿಲ್ಲಾ ಘಟಕಗಳ ಪದಾಧಿಕಾರಿಗಳನ್ನು ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳನ್ನು ನೇಮಿಸಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ಹೊಸ ನಿಬಂಧನೆಯನ್ನು ಹೊರಡಿಸಿದೆ. ಈ ಆದೇಶದಿಂದ ಕೆಲ ಆಕಾಂಕ್ಷಿಗಳಿಗೆ ಬಿಸಿ ತಾಕಿದಂತಾಗಿದೆ..!


ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ೧೪ (ಈ) ರಲ್ಲಿ ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ನೇಮಿಸಿಕೊಳ್ಳಲು ಕೇಂದ್ರ ಅಧ್ಯಕ್ಷರ ಅನುಮತಿ ಪಡೆದು, ನಂತರ ಪ್ರಕಟಿಸಬೇಕು, ಯಾವುದೇ ಬದಲಾವಣೆಗೆ ಕೇಂದ್ರ ಅಧ್ಯಕ್ಷರ ಪೂರ್ವಭಾವಿ ಒಪ್ಪಿಗೆ ಪಡೆಯಬೇಕು ಎಂಬ ನಿಯಮವಿದೆ. ಈ ನಿಯಮಾನುಸಾರ ಜಿಲ್ಲಾ, ತಾಲ್ಲೂಕು ಹಾಗೂ ಗಡಿನಾಡು ಘಟಕಗಳ ಕಾರ್ಯಕಾರಿ ಸಮಿತಿಗಳನ್ನು ರಚಿಸಿಕೊಳ್ಳಬೇಕು ಎಂಬ ಈ ನಿಯಮವನ್ನು ಅನುಸರಿಸದೇ ಈಗಾಗಲೇ ಘಟಕಗಳಿಗೆ ಪದಾಧಿಕಾರಿಗಳನ್ನು, ತಾಲ್ಲೂಕು ಅಧ್ಯಕ್ಷರುಗಳನ್ನು ನೇಮಕಮಾಡಿಕೊಂಡು ಪ್ರಕಟಿಸಿದ್ದರೆ… ಅಂತಹ ನೇಮಕಗಳನ್ನು ಮಾನ್ಯ ಮಾಡುವುದಿಲ್ಲ ಹಾಗೂ ಆ ನೇಮಕಗಳು ಅಸಿಂಧುವಾಗುತ್ತವೆ ಎಂದು 12-12-2021 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ೦4-12-2021 ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಹಾಗಾದರೆ, ಜಿಲ್ಲಾ ಘಟಕಗಳ ಪದಾಧಿಕಾರಿಗಳನ್ನು ಹಾಗೂ ತಾಲ್ಲೂಕು ಅಧ್ಯಕ್ಷರುಗಳನ್ನು ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಕಮಾಡಿಕೊಳ್ಳಲು ಅನುಸರಿಸ ಬೇಕಾದ ನಿಯಮಗಳು ಯಾವುವು?

1) ಜಿಲ್ಲಾ /ತಾಲ್ಲೂಕು ಗಡಿನಾಡು ಘಟಕಗಳಿಗೆ ನೇಮಕವಾಗುವ ಕಾರ್ಯಕಾರಿ ಸಮಿತಿಯ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು.
2) ಒಂದು ಬಾರಿ ಪದಾಧಿಕಾರಿಗಳು / ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲಿ ಅಂಥವರನ್ನು ಮರುನೇಮಕ ಮಾಡದೇ, ಹೊಸಬರಿಗೆ ಪರಿಷತ್ತಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು.
3) ನೇಮಕಗೊಳ್ಳುವ ಸದಸ್ಯರು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಸೇರಿದಂತೆ ನಾಡು-ನುಡಿಗೆ ಸೇವೆ ಸಲ್ಲಿಸಿರಬೇಕು.
4) ಕೇಂದ್ರ ಅಧ್ಯಕ್ಷರ ಅನುಮೋದನೆಗಾಗಿ ಕಳಿಸುವ ನೇಮಕ ಪತ್ರದೊಂದಿಗೆ ನೇಮಕಗೊಳ್ಳುವ ಸದಸ್ಯರ ಸ್ವ-ವಿವರ, ಭಾವಚಿತ್ರ ಸಾಹಿತ್ಯ ಕೃಷಿ ಹಾಗೂ ಕ.ಸಾ.ಪ. ಸದಸ್ಯತ್ವ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.
5) ನೇಮಕಗೊಳ್ಳುವ ಕಾರ್ಯಕಾರಿ ಸಮಿತಿ ಸದಸ್ಯರು ನಾಡು-ನುಡಿಗೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಅಪರಾಧದ ಹಿನ್ನೆಲೆಯಲ್ಲಿ ಮೊಕದ್ದಮೆಯನ್ನು ಎದುರಿಸುತ್ತಿದ್ದರೆ ಅಂಥವರನ್ನು ಪರಿಗಣಿಸಬಾರದು. ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ-ಗೌರವಗಳಿಗೆ ಧಕ್ಕೆಬಾರದಂತೆ ನಿಬಂಧನೆಯನುಸಾರ ತಮ್ಮ ಘಟಕಗಳನ್ನು ರಚಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಮಲಿಂಗಶೆಟ್ಟಿ ಅವರು ರಾಜ್ಯದ ಎಲ್ಲಾ 30 ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರುಗಳಿಗೆ ಕ್ರಮಕೈಗೊಳ್ಳಲು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಕೃಷಿ ಮಾಡದೇ ಇರುವವರು ಹಾಗೂ ಸದಸ್ಯರಲ್ಲದವರಿಗೆ ಮತ್ತು ಒಂದು ಸಾರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಸ್ಥಾನ ಅನುಭವಿಸಿದವರಿಗೆ ಈ ಹೊಸ ಆದೇಶದಿಂದ ಬಿಸಿ ತಾಗಿರುವುದಂತು ಸತ್ಯ. ಜಿಲ್ಲಾ ಕಸಾಪ ಅಧ್ಯಕ್ಷರ ಪರಮಾಧಿಕಾರಕ್ಕೆ ಕೊಕ್ಕೆ ಹಾಕಿದ ಈ ಆದೇಶ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರ ಸರ್ವಾಧಿಕಾರಿ ಧೋರಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವವರು ಚುನಾಯಿತರಾಗಿರುವುದನ್ನು ಕೇಂದ್ರ ಸಮಿತಿ ಮರೆತಂತೆ ಕಾಣಿಸುತ್ತಿದೆ..!!