ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಬದಲಾದ ವಾತಾವರಣದಲ್ಲಿ ಬೀಳುವ ವಿಪರೀತ ಚಳಿಯಿಂದ ನಾಡಿನ ಜನ ತತ್ತರಿಸಿ ಹೋಗಿದೆ. ಬೆಳಗಿನ ಜಾವದಲ್ಲಿ ಮಂಜಿನ ಜೊತೆಗೆ ಬೀಳುವ ಚಳಿಯು ಮನುಕುಲಕ್ಕೆ ಮಾರಕವಾಗುವಂತಾಗಿದೆ..!
ಸಮರ್ಪಕ ಮಳೆ ಇಲ್ಲದೇ ಬೇಸಿಗೆ ಬರಗಾಲವನ್ನೇ ಅನುಭವಿಸಿದ್ದ ರಾಜ್ಯ 2020-21ನೇ ವರ್ಷಗಳ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲಿನ ಉಷ್ಣತೆ ಮರೆಮಾಚಿ ಸಕಾಲಿಕ-ಅಕಾಲಿಕ ಮಳೆಯಾಗಿದೆ. ಕಳೆದ ವರ್ಷದ ಚಳಿಗಾಲದ ದಿನಗಳಲ್ಲಿ ಅಷ್ಟೊಂದು ಚಳಿ ಆವರಿಸಿದ್ದಿಲ್ಲ. ಆದರೆ, ನಿರಂತರ ಮಳೆಯಿಂದಾಗಿ ಇಳೆ ಸಂಪೂರ್ಣ ಹಸಿಯಾಗಿತ್ತು. ಅಷ್ಟೇ ಅಲ್ಲದೇ ಎಷ್ಟೋ ವರ್ಷಗಳಿಂದ ನೀರು ಕಾಣದೆ ಬತ್ತಿ ಬರುಡಾಗಿದ್ದ ಪುರಾತನ ಬಾವಿಗಳಲ್ಲಿ ಹಾಗೂ ನೆಲ ಮಹಡಿಗಳಲ್ಲಿ ನೀರಿನ ಸೆಲೆ ಹೆಚ್ಚಾಗಿ ನೀರು ತುಂಬಿಕೊಳ್ಳುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಎರಡು ವರ್ಷಗಳಿಂದ ಅಷ್ಟೊಂದು ಬಿಸಿಲು ಕಾಣದೆ ಇರುವ ಭೂಮಿ ತಂಪಾಗಿ ಮಾರ್ಪಟ್ಟಿರುವುದರಿಂದ ಈ ವರ್ಷ ರಾಜ್ಯದಲ್ಲಿ ಅತೀವ ಚಳಿ ಅನುಭವಿಸುವಂತಾಗಿದೆ.
ಎರಡು ವರ್ಷಗಳ ಕಾಲ ಬಿಟ್ಟು ಬಿಡದೇ ಕಾಡಿದ ಮಹಾಮಾರಿ ಸಾಂಕ್ರಾಮಿಕ ಕೋವಿಡ್ ನಿಂದಾಗಿ ಶಾಲಾ – ಕಾಲೇಜುಗಳನ್ನು ಸರ್ಕಾರ ಬಂದ್ ಗೊಳಿಸಿತ್ತು. ಸೋಂಕಿನ ಪ್ರಮಾಣ ಕುಗ್ಗುತ್ತಿದ್ದಂತೆ ಮತ್ತೆ ಶೈಕ್ಷಣಿಕ ಚೆಟುವಟಿಕೆಗಳು ಆರಂಭಗೊಂಡಿದ್ದು, ಎರಡು ವರ್ಷಗಳಿಂದ ಶಿಕ್ಷಣ ವಂಚಿತರಾಗಿದ್ದ ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಂತೆ ಈ ಮಹಾ ಚಳಿಗೆ ಹೆದರಿ ಮನೆಯಲ್ಲಿಯೇ ಕೂಡುವಂತಾಗಿದೆ.
ಅಸ್ತಮಾದಂತಹ ಹಾಗೂ ಕ್ಷಯ ಕಾಯಿಲೆಗೆ ಒಳಗಾಗಿರುವವರು ಮತ್ತು ವಯೋವೃದ್ದರು ಈ ಚಳಿಗೆ ಮತ್ತಷ್ಟು ನಲುಗುವಂತಾಗಿರುವುದಂತು ಸತ್ಯ..!!